ಹಕ್ಕು ಪತ್ರಕ್ಕೆ ವಿಧಿಸಿರುವ ಭೂಮೌಲ್ಯವನ್ನು ಸರಕಾರ ಕಡಿಮೆ ಮಾಡಲಿ -ಅಬ್ದುಲ್ ಹಮೀದ್ ಫರಾನ್
ಮಂಗಳೂರು: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ದ.ಕ.ಜಿಲ್ಲೆಯು ನಗರದ ಸಹೋದಯ ಹಾಲ್ನಲ್ಲಿ ಅಕ್ಟೋಬರ್ 15ರಂದು ಜಿಲ್ಲಾ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಹಮೀದ್ ಫರಾನ್ ಮಾತಾಡುತ್ತಾ, “ದೇಶದಲ್ಲಿ 70%ಕ್ಕಿಂತ ಹೆಚ್ಚಿರುವ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಹಾಗೂ ಸಮಾನ ಮನಸ್ಕರನ್ನು ಒಂದೇ ವೇದಿಕೆಯಲ್ಲಿ ತಂದರೆ, ಖಂಡಿತವಾಗಿಯೂ ಕೋಮುವಾದಿ ಬಿಜೆಪಿ ಮತ್ತು ಕಾಂಗ್ರೆಸ್ನ್ನು ತಲೆಯೆತ್ತದಂತೆ ಮಾಡಬಹುದು. ಇದಕ್ಕಾಗಿ ಜನರನ್ನು ಜಾಗೃತಗೊಳಿಸುವ ಕೆಲಸ ನಡೆಯಬೇಕಾಗಿದೆ. ನನ್ನ ಇಷ್ಟು ವರ್ಷದ ರಾಜಕೀಯ ಅನುಭವದಿಂದ ಹೇಳುತ್ತಿದ್ದೇನೆ. ಎಲ್ಲಾ ರಾಜಕೀಯ ಪಕ್ಷಗಳಿಂದಲೂ ಜನತೆ ರೋಸಿ ಹೋಗಿ ಮುಂದೊಂದು ದಿನ ವೆಲ್ಫೇರ್ ಪಾರ್ಟಿಗೂ ಅತ್ಯುತ್ತಮ ಆಡಳಿತವನ್ನು ನಡೆಸುವ ಸಂದರ್ಭವನ್ನು ಜನರು ನೀಡಲಿದ್ದಾರೆ. ಆ ಸಂದರ್ಭಕ್ಕಾಗಿ ನಾವು ತಯಾರಿ ನಡೆಸುತ್ತಿರಬೇಕು” ಎಂದು ಹೇಳಿದರು.
ಕಾರ್ಯಕ್ರಮದ ಬಳಿಕ ತಮ್ಮ ರಾಜಕೀಯ ಸಂಗಾತಿ ಸಚಿವ ಯು.ಟಿ.ಖಾದರ್ರನ್ನು ಭೇಟಿಯಾಗಿ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಸಂಜೆ ನಗರದ ನಗರಪಾಲಿಕಾ ಕ್ಷೇತ್ರವಾದ ಬೆಂಗರೆಗೆ ಅಭೂತಪೂವ ಸ್ವಾಗತದೊಂದಿಗೆ ಭೇಟಿ ನೀಡಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಾ “ಕಾಂಗ್ರೆಸ್ ಸರಕಾರವು ಹೊಸ ಹಕ್ಕುಪತ್ರಕ್ಕೆ ಹತ್ತು ಸಾವಿರ ಭೂಮೌಲ್ಯ ನಿಗದಿಪಡಿಸಿರುವುದನ್ನು ಕೂಡಲೇ ಕಡಿಮೆಗೊಳಿಸಬೇಕು. ಕರ್ನಾಟಕ ಜನತೆಯು ಈಗಾಗಲೇ ಕೇಂದ್ರ ಬಿಜೆಪಿ ಸರಕಾರದ ನೋಟ್ಬ್ಯಾನ್ ಮತ್ತು ಜಿ.ಎಸ್.ಟಿ.ಯಿಂದ ಕಷ್ಟ ಅನುಭವಿಸುತ್ತಿದ್ದಾರೆ. ಈ ವಿಷಯವಾಗಿ ನಾವು ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರೊಂದಿಗೆ ಮನವಿ ಮಾಡಲಿದ್ದೇವೆ” ಎಂದರು.
ಈ ಎಲ್ಲಾ ಸಂದರ್ಭಗಳಲ್ಲೂ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲಿಯಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ತಾಹಿರ್ ಹುಸೈನ್, ಜಿಲ್ಲಾಧ್ಯಕ್ಷ ಮೊಯಿನುದ್ದೀನ್ ಖಮರ್, ಜಿಲ್ಲಾ ಉಪಾಧ್ಯಕ್ಷ ಎಸ್.ಎಮ್. ಮುತ್ತಲಿಬ್ ಉಪಸ್ಥಿತರಿದ್ದು ಸಾಂದರ್ಭಿಕವಾಗಿ ಮಾತನಾಡಿದರು.