ಹಗರಣಗಳನ್ನು ಮುಚ್ಚಿ ಹಾಕಲು ಕಾಂಗ್ರೆಸಿಗರಿಂದ ನೀಚ ಹೇಳಿಕೆಗಳ ಗುರಾಣಿ ಬಳಕೆ-ಯಶ್‍ಪಾಲ್ ಸುವರ್ಣ

Spread the love

ಹಗರಣಗಳನ್ನು ಮುಚ್ಚಿ ಹಾಕಲು ಕಾಂಗ್ರೆಸಿಗರಿಂದ ನೀಚ ಹೇಳಿಕೆಗಳ ಗುರಾಣಿ ಬಳಕೆ-ಯಶ್‍ಪಾಲ್ ಸುವರ್ಣ

ಉಡುಪಿ: ಸಚಿವ ರೋಶನ್ ಬೇಗ್ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನೀಡಿರುವ ಹೇಳಿಕೆಯ ಹಿಂದೆ ಹಗರಣಗಳನ್ನು ಮುಚ್ಚಿ ಹಾಕುವ ಸಂಚು ಅಡಗಿದೆ ಎಂದು ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ಮೀನುಗಾರ ಮುಖಂಡ ಯಶ್‍ಪಾಲ್ ಸುವರ್ಣ ಅವರು ಆರೋಪಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿರುವ ಡಿನೋಟಿಫೈ ಹಗರಣ ಎಲ್ಲಾ ಮಾದ್ಯಮಗಳಲ್ಲಿ ಚರ್ಚೆಯ ವಿಚಾರವಾಗಿದೆ. ಇನ್ನೊಂದು ಕಡೆ ರಾಜ್ಯ ಕಾಂಗ್ರೇಸಿನ ಉಸ್ತುವಾರಿ ಹೊಂದಿರುವ ವೇಣುಗೋಪಾಲ್ ನಡೆಸಿರುವ ಸೋಲಾರ್ ಹಗರಣ ರಾಷ್ಟ್ರ ಮಟ್ಟದಲ್ಲೇ ಸದ್ದು ಮಾಡುತ್ತಿದೆ. ಜನರ ಮುಂದೆ ಬೆತ್ತಲಾಗಿ ನಿಂತಿರುವ ರಾಜ್ಯ ಸರಕಾರದ ಕಡೆಯಿಂದ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಸಚಿವ ರೋಶನ್ ಬೇಗ್ ಅವರು ಈ ಕುತಂತ್ರವನ್ನು ಹೂಡಿದ್ದಾರೆ. ಆದರೆ ರಾಜ್ಯದ ಜನರು ಪ್ರಬುದ್ಧರಾಗಿದ್ದಾರೆ. ಈ ರೀತಿಯ ತಂತ್ರಗಳಿಂದ ಕಾಂಗ್ರೆಸಿಗರ ಹಗರಣಗಳನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ. ಡಿನೋಟಿಫೈ ಹಗರಣದ ವಿರುದ್ಧ ಬಿಜೆಪಿ ಜಿಲ್ಲೆಯಾದ್ಯಂತ ಜನಜಾಗೃತಿ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.

ಯುಪಿಎ ಅವಧಿಯಲ್ಲಿ ಕೇಂದ್ರ ಸರಕಾರದ ಹಗರಣಗಳು ದಿನಕ್ಕೊಂದರಂತೆ ಹೊರ ಬರುತ್ತಿತ್ತು. ಆದರೆ ನರೇಂದ್ರ ಮೋದಿಯವರ ಸರಕಾರ ಬಂದ ಬಳಿಕ ಒಂದೇ ಒಂದು ಬ್ರಷ್ಟಾಚಾರದ ಪ್ರಕರಣಗಳು ನಡೆದಿಲ್ಲ. ಸುಖಾ ಸುಮ್ಮನೆ ಮೋದಿಯವರ ಖಾಸಗಿ ಬದುಕು, ಬಟ್ಟೆ ಬರೆಗಳು ವಿದೇಶಿ ಪ್ರಯಾಣದ ಬಗ್ಗೆ ವ್ಯರ್ಥಾರೋಪ ಮಾಡುತ್ತಾ ವಿಪಕ್ಷಗಳು ನಗೆಪಾಟಲಿಗೀಡಾಗುತ್ತಿವೆ. ಇದೀಗ ರಾಜ್ಯದ ಕಾಂಗ್ರೆಸ್ ಸಚಿವ ರೋಶನ್ ಬೇಗ್ ಒಂದು ಹೆಜ್ಜೆ ಮುಂದೆ ಹೋಗಿ ತನಗೆ ಕಾಂಗ್ರೆಸ್ ಪಕ್ಷ ಕರುಣಿಸಿರುವ ಸಂಸ್ಕಾರವನ್ನು ಬಳಸಿ ಕೆಟ್ಟದಾದ ಭಾಷೆಯಲ್ಲಿ ಪ್ರಧಾನಿಯವರನ್ನು ನಿಂದಿಸಿದ್ದಾರೆ. ಇಂತಹ ವ್ಯಕ್ತಿಯ ಕೈಯಲ್ಲಿ ರಾಜ್ಯದ ಶಿಕ್ಷಣ ವ್ಯವಸ್ಥೆ ಸಿಲುಕಿರುವುದು ನಿಜಕ್ಕೂ ದುರಂತವೇ ಸರಿ. ನರೇಂದ್ರ ಮೋದಿಯವರು ಮೊನ್ನೆ ತನ್ನ ಹುಟ್ಟೂರಿನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದಂತೆ ಅವರು ಕಳೆದ ಹನ್ನೆರಡು ವರ್ಷಗಳಿಂದ ಎಲ್ಲಾ ಆರೋಪ, ಅಪಮಾನಗಳನ್ನು ಅರಗಿಸಿಕೊಂಡೇ ಬೆಳೆದಿದ್ದಾರೆ. ಆದರೆ ಈ ಸಹನೆಯನ್ನು ಕಾಂಗ್ರೆಸಿಗರು ದೌರ್ಬಲ್ಯವೆಂದು ಬಗೆದು ಈ ರೀತಿಯ ದುಷ್ಟ ಚೇಷ್ಟೆಯನ್ನು ಮುಂದುವರೆಸುತ್ತಾ ಹೋದರೆ ಪರಿಸ್ಥಿತಿ ನೆಟ್ಟಗಿರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕೆ ಕಾಂಗ್ರೆಸ್ ನಾಯಕರೇ ಸಹಕರಿಸುತ್ತಿದ್ದು, ರೋಶನ್ ಬೇಗ್ ಸಹಿತ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿಯವರ ಕುರಿತಾಗಿ ಮಾಡಿರುವ ಎಲ್ಲಾ ಅವಹೇಳನಗಳಿಗೆ ಮುಂದಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರ ಪ್ರಭುಗಳು ಉತ್ತರಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಖಂಡನೆ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ವಿರುದ್ಧ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ  ರೋಷನ್ ಬೇಗ್ ಉಪಯೋಗಿಸಿರುವ ಅಸಂವಿಧಾನಿಕ ಪದಗಳ ಬಳಕೆ ರಾಜ್ಯ ಸರ್ಕಾರದ ಮಂತ್ರಿಗಳ ಯೋಗ್ಯತೆಯನ್ನು ಸೂಚಿಸುತ್ತದೆ. ರಾಜ್ಯದ ಜನತೆಯನ್ನು ಪ್ರತಿನಿಧಿಸುತ್ತಿರುವ ಸಚಿವ ಬೇಗ್  ದೇಶದ ಪ್ರಧಾನಿಗಳ ಬಗ್ಗೆ ಕೀಳು ಮಟ್ಟದ ಪದ ಪ್ರಯೋಗಿಸಿರುವುದನ್ನು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಖಂಡಿಸಿದ್ದಾರೆ.  ಎಲುಬಿಲ್ಲದ ನಾಲಿಗೆಯನ್ನು ಹರಿಬಿಟ್ಟಿರುವ ಸಚಿವ ರೋಷನ್ ಬೇಗ್ ನ್ನು ಮುಖ್ಯಮಂತ್ರಿಗಳು ಕೂಡಲೇ ಸಂಪುಟದಿಂದ ವಜಾಗೊಳಿಸದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನತೆಯೇ ಇಂತಹ ಸಚಿವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.


Spread the love