ಹಣ ವಸೂಲಿ ದಂದೆ ನಡೆಸುವ ಸಂಘಟನೆಗಳಿಗೆ ಕಡಿವಾಣ ಹಾಕಲು ಅಣ್ಣಾಮಲೈ ಚಿಂತನೆ

Spread the love

ಹಣ ವಸೂಲಿ ದಂದೆ ನಡೆಸುವ ಸಂಘಟನೆಗಳಿಗೆ ಕಡಿವಾಣ ಹಾಕಲು ಅಣ್ಣಾಮಲೈ ಚಿಂತನೆ

ಚಿಕ್ಕಮಗಳೂರು: ಮಟ್ಕಾ, ಇಸ್ಪೀಟ್‌ ಜೂಜುಕೋರರು, ಮದ್ಯ ಅಕ್ರಮ ಮಾರಾಟಗಾರರು, ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸಿರುವ ಜಿಲ್ಲಾ ಪೊಲೀಸ್‌ ಇಲಾಖೆ ಈಗ ಸಮಾಜ ಸೇವೆ ಮತ್ತು ಭ್ರಷ್ಟಾಚಾರ ವಿರುದ್ಧದ ಹೋರಾಟದ ಹೆಸರು ಹೇಳಿಕೊಂಡು ಪ್ರತಿಭಟನೆ, ಮುತ್ತಿಗೆ ನೆಪದಲ್ಲಿ ಹಣ ವಸೂಲಿ ದಂದೆ ನಡೆಸುವ ಸಂಘಟನೆಗಳ ಉಪಟಳಕ್ಕೆ ಕಡಿವಾಣ ಹಾಕಲು ಮುಂದಾಗಿದೆ.

ವಸೂಲಿ ಸಂಘಟನೆಗಳ ವಿರುದ್ಧ ಚಾಟಿ ಬೀಸಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ, ಇನ್ನು ಮುಂದೆ ಯಾವುದೇ ಸಂಘಟನೆಗಳು ಹಣ ವಸೂಲು ಮಾಡುವ ಉದ್ದೇಶ ದಿಂದ ಸಾರ್ವಜನಿಕರಿಗೆ ತೊಂದರೆ ಕೊಡುವುದು ಅಥವಾ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು ಕಂಡುಬಂದಲ್ಲಿ, ಸಂಬಂಧಿಸಿದವರು ಕೂಡಲೇ ಸ್ಥಳೀಯ ಪೊಲೀಸರಿಗೆ ದೂರು ನೀಡಬೇಕು. ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾ ಗುವುದು ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಕೆಲವು ಸಂಘಟನೆಗಳು ಹಣ ವಸೂಲು ಮಾಡುವ ಉದ್ದೇಶ ದಿಂದ ವಿವಿಧ ಕಾರಣಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕುವುದು ಮತ್ತು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವುದು ಪೊಲೀಸ್ ಇಲಾಖೆ ಗಮನಕ್ಕೆ ಬಂದಿದೆ. ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇತ್ತೀಚೆಗೆ ಇಂತಹ ಘಟನೆಗಳು ಕಂಡುಬಂದಿವೆ.

ಇದಕ್ಕೆ ಕಠಿಣ ಕ್ರಮವನ್ನು ಪೊಲೀಸ್ ಇಲಾಖೆಯಿಂದ ಕೈಗೊಳ್ಳಲಾಗಿದೆ. ಅಲ್ಲದೆ ಸಂಘಟನೆ ಸದಸ್ಯರಿಗೆ ಕಠಿಣ ಎಚ್ಚರಿಕೆ ಸಹ ನೀಡ ಲಾಗಿದೆ. ಇದೇ ರೀತಿ ನರಸಿಂಹ ರಾಜಪುರದಲ್ಲಿ ಯೂ ಸಹ ಕೆಲವು ಸಂಘಟನೆ ಗಳು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲು ಹೋಗಿದ್ದು, ಈ ಬಗ್ಗೆಯೂ ಸಹ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ನಗರದ ಆಧಿಶಕ್ತಿ ನಗರ ದಲ್ಲಿ ಪರವಾನಗಿ ಇಲ್ಲದೆ ನಡೆಯುತ್ತಿದ್ದ ಫ್ಲೈವುಡ್‌ ಕಾರ್ಖಾನೆಯನ್ನು ನಗರಸಭೆ ಆಡಳಿತ ಮುಚ್ಚಿಸಿದ ಸಂದರ್ಭದಲ್ಲಿ ಕೆಲ ಸಂಘಟನೆಗಳ ಸದಸ್ಯರು, ತೇಗೂರು ಸಮೀಪ ಇರುವ ಕೆಲವು ಸಾಮಿಲ್‌ಗಳಿಗೆ ಹೋಗಿ ಹಣ ವಸೂಲಿ ಮಾಡಲು ಯತ್ನಿಸಿದ್ದ ಬಗ್ಗೆ ಸಾಮಿಲ್‌ ಮಾಲೀಕರು ಪೊಲೀಸ್‌ ಇಲಾಖೆ ಗಮನಕ್ಕೆ ತಂದಿ ದ್ದರು. ಅಲ್ಲದೆ, ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಉದ್ದೆಬೋರನ ಹಳ್ಳಿಯಲ್ಲಿ ರೈತರೊಬ್ಬರು ಕೊಳವೆಬಾವಿ ಕೊರೆಸುತ್ತಿದ್ದಾಗ ಸಂಘಟನೆಯೊಂದರ ಸದಸ್ಯರು ಸ್ಥಳಕ್ಕೆ ಹೋಗಿ, ₹30 ಸಾವಿರ ಹಣ ಕಸಿದುಕೊಂಡು ಬಂದಿದ್ದರು.

ಈ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಮತ್ತು ಎನ್‌.ಆರ್‌.ಪುರದಲ್ಲಿ ಹಣ ವಸೂಲಿ ಉದ್ದೇಶದಿಂದ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿದ್ದ ಸಂಘಟನೆಯೊಂದರ 11 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು  ತಿಳಿಸಿವೆ.


Spread the love