ಹಣಕಾಸಿನ ಹಂಚಿಕೆಯಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಮೋಸ : ಸಂಘಟಿತ ಹೋರಾಟಕ್ಕೆ ಕೆಪಿಸಿಸಿ ವಕ್ತಾರೆ ಯು.ಟಿ. ಫರ್ಝಾನ ಆಗ್ರಹ

Spread the love

ಹಣಕಾಸಿನ ಹಂಚಿಕೆಯಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಮೋಸ : ಸಂಘಟಿತ ಹೋರಾಟಕ್ಕೆ ಕೆಪಿಸಿಸಿ ವಕ್ತಾರೆ ಯು.ಟಿ. ಫರ್ಝಾನ ಆಗ್ರಹ

ಮಂಗಳೂರು: ಹಣಕಾಸಿನ ಹಂಚಿಕೆಯಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಮೋಸ ಆಗಿದೆ. ಕೇಂದ್ರ ಸರಕಾರದ ಮಾಡಿರುವ ಅನ್ಯಾಯದಿಂದಾಗಿ ಕರ್ನಾಟಕ ಹಣಕಾಸಿನ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ರಾಜ್ಯಕ್ಕೆ ನ್ಯಾಯದೊರಕಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ಲೋಕಸಭಾ ಸದಸ್ಯರೊಂದಿಗೆ, ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧ್ವನಿಗೂಡಿಸಬೇಕು. ಅದರಲ್ಲೂ ಕರ್ನಾಟಕದ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಆಸಕ್ತಿ ವಹಿಸಬೇಕು ಎಂದು ಕೆಪಿಸಿಸಿ ವಕ್ತಾರೆ ಯು.ಟಿ.ಫರ್ಝಾನ ಆಗ್ರಹಿಸಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಕೈಗೊಂಡಿರುವ ‘ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದರು

ಕೇಂದ್ರದಿಂದ ಉತ್ತರ ಪ್ರದೇಶಕ್ಕೆ 31,962 ಕೋಟಿ ರೂ. ಪಾಲು ನೀಡಲಾಗಿದೆ. ಬಿಹಾರಕ್ಕೆ 17,921 ಕೋಟಿ ರೂ, ಮಧ್ಯಪ್ರದೇಶಕ್ಕೆ 13, 987 ಕೋಟಿ ರೂ, ರಾಜಸ್ಥಾನಕ್ಕೆ 10,737 ಕೋಟಿ ರೂ. ಆದರೆ ಕರ್ನಾಟಕಕ್ಕೆ ಕೇವಲ 6,493 ಕೋಟಿ ರೂ. ನೀಡಲಾಗಿದೆ. ಇದರೊಂದಿಗೆ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಇದರ ವಿರುದ್ಧ ಸಂಘಟಿತ ಹೋರಾಟ ಅಗತ್ಯ ಎಂದರು.

ಆಡಳಿತ ನಡೆಸುವವರು ಯಾವತ್ತೂ ರಾಜಧರ್ಮವನ್ನು ಮರೆಯಬಾರದು. ಕರ್ನಾಟಕದಲ್ಲಿ ರಾಜ್ಯ ಸರಕಾರ ಬಡವರ ಪರ ಅನುಷ್ಠಾನಗೊಳಿಸಿರುವ ಯೋಜನೆಗಳ ಬಗ್ಗೆ ಲೇವಡಿ ಮಾಡುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.

15ನೇ ಹಣಕಾಸು ಯೋಜನೆ ಜಾರಿ ಬಳಿಕ ಮೋಸ: ಹಿಂದೆ ನಾವು ಕೇಂದ್ರಕ್ಕೆ ನೀಡಿದ ತೆರಿಗೆ ದುಡ್ಡಿನಲ್ಲಿ ನಮಗೆ ಶೇ.4.07 ರಷ್ಟು ತೆರಿಗೆ ಹಣ ವಾಪಸ್ ಬರುತ್ತಿತ್ತು. ಆದರೆ ಈಗ ಬರುವುದು ಶೇ 3.64ರಷ್ಟು ಹಣ ಮಾತ್ರ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಯೋಜನಾ ಆಯೋಗ ರದ್ದು ಮಾಡಿ ನೀತಿ ಆಯೋಗ ಜಾರಿಗೊಳಿಸುವಾಗ ಎಲ್ಲರೂ ಭಾರೀ ನಿರೀಕ್ಷೆಯಲ್ಲಿದ್ದರು. ವಿಕೇಂದ್ರೀಕರಣ ಆಗುತ್ತದೆ. ಎಲ್ಲ ರಾಜ್ಯಗಳಲ್ಲಿ ಹಣಕಾಸಿನ ಸಮಸ್ಯೆ ದೂರವಾಗುತ್ತದೆ ಅಂದುಕೊಂಡಿದ್ದರು. ಸಂಪತ್ತನ್ನು ಹಂಚಿ ತಿನ್ನುವ ಯೋಜನೆ ಎಂದು ಜನರು ಭಾವಿಸಿದ್ದರು. ಆದರೆ ಆದದ್ದು ಬೇರೆ. ಅದುವರೆಗಿನ ಹಣಕಾಸಿನ ಆಯೋಗಗಳು 1971ರ ಜನಗಣತಿಯ ಆಧಾರದಲ್ಲಿ ರಾಜ್ಯಕ್ಕೆ ಪಾಲು ನೀಡುತ್ತಿತ್ತು. 15ನೇ ಹಣಕಾಸು ಆಯೋಗ ಜಾರಿಗೆ ಬಂದ ಬಳಿಕ ನಮಗೆ ಮೋಸ ಆಗಿದೆ. 4 ವರ್ಷಗಳಲ್ಲಿ 45 ಸಾವಿರ ಕೋಟಿ ರೂ. ರಾಜ್ಯಕ್ಕೆ ಅನುದಾನ ಕಡಿಮೆಯಾಗಿದೆ. ಅಂದಾಜಿನ ಪ್ರಕಾರ 62,098 ಕೋಟಿ ರೂ.ಗಳು ಕರ್ನಾಟಕಕ್ಕೆ ಕಡಿಮೆಯಾಗಿದೆ. 2020-25ರ ವರೆಗಿನ 15ನೇ ಹಣಕಾಸು ಆಯೋಗದ ಸಹಾಯಧನ ಮತ್ತು ಜಿಎಸ್‌ಟಿ ಪರಿಹಾರ ಸೇರಿದಂತೆ ಒಟ್ಟು 73, 593 ಕೋಟಿ ರೂ ರಾಜ್ಯಕ್ಕೆ ಬಂದಿಲ್ಲ ಎಂದು ವಿವರಿಸಿದರು.


Spread the love
Subscribe
Notify of

0 Comments
Inline Feedbacks
View all comments