ಹಣ್ಣಿನ ಸಿಪ್ಪೆಗಳ ಮರುಬಳಕೆ ಕುರಿತು ವಾಟ್ಸಾಪ್ ಮುಕಾಂತರ ಬಯೋ ಎನ್‍ಜೈಮ್ ತರಬೇತಿ

Spread the love

ಹಣ್ಣಿನ ಸಿಪ್ಪೆಗಳ ಮರುಬಳಕೆ ಕುರಿತು ವಾಟ್ಸಾಪ್ ಮುಕಾಂತರ ಬಯೋ ಎನ್‍ಜೈಮ್ ತರಬೇತಿ

ಉಡುಪಿ: ಹಣ್ಣುಗಳ ಸಿಪ್ಪೆಯನ್ನು ಸಂಸ್ಕರಿಸಿ ಮರು ಬಳಕೆ ಮಾಡುವ ಕುರಿತು ವಾಟ್ಸಾಪ್ ಮುಕಾಂತರ ಬಯೋ ಎನ್ ಜೈಮ್ ತಯಾರಿಕ ತರಬೇತಿ ಕಾರ್ಯಾಗಾರವನ್ನು ಸಾವಯವ ಬದುಕು ತಂಡದಿಂದ ಆಯೋಜಿಸಲಾಗಿದೆ ಎಂದು ತಂಡದ ಸಂಚಾಲಕ ಮಹೇಶ್ ಶೆಣೈ ಹೇಳಿದರು.

ಅವರು ಮಂಗಳವಾರ ಪ್ರೆಸ್ ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಇಂದು ನಮ್ಮ ದಿನನಿತ್ಯದ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ನಮ್ಮೆಲ್ಲರ ಮುಂದೆ ಇರುವ ಒಂದು ದೊಡ್ಡ ಸವಾಲಾಗಿದೆ. ಅದೇ ರೀತಿ ನಾವೇಲ್ಲಾ ಪ್ರತಿನಿತ್ಯ ಬಳಸುವ ಟಾಯ್ಲೆಟ್ ಫಿನಾಯ್ಲ್, ಕ್ಲೀನಿಂಗ್ ಪೌಡರ್, ಬ್ಲೀಚಿಂಗ್ ಪೌಡರ್, ಹ್ಯಾಂಡ್ ವಾಶ್ ಇತ್ಯಾದಿಗಳಲ್ಲಿ ಕೆಮಿಕಲ್ ಹಾಗೂ ಎಸಿಡ್ ಅಂಶಗಳಿದ್ದು, ಇವುಗಳು ನಮ್ಮ ಆರೋಗ್ಯಕ್ಕೂ ಪ್ರಕೃತಿಗೂ ಹಾನಿ ಉಂಟು ಮಾಡುತ್ತಿದೆ.

ಇದಕ್ಕೆ ಸುಲಭ ಪರ್ಯಾಯೋಪಾಯವಾಗಿ ನಾವು ಉಪಯೋಗಿಸಿ ಬಿಸಾಡುವ ಹಣ್ಣುಗಳ ಸಿಪ್ಪೆಗಳನ್ನು ಸಂಸ್ಕರಿಸಿ ಟಾಯ್ಲೆಟ್ ಕ್ಲೀನರ್, ಫಿನಾಯ್ಲ್ ಕ್ಲೀನಿಂಗ್ ಪೌಡರ್, ಬ್ಲೀಚಿಂಗ್ ಪೌಡರ್, ಹ್ಯಾಂಡ್ ವಾಶ್ ಇತ್ಯಾದಿಗಳನ್ನು ಇವುಗಳ ಬದಲಾಗಿ ಬಳಕೆ ಮಾಡಬಹುದು. ಈ ಹಣ್ಣುಗಳ ಸಿಪ್ಪೆಗಳನ್ನು ಸಂಸ್ಕರಿಸಿ ತಯಾರು ಮಾಡುವ ವಿಧಾನಕ್ಕೆ ಬಯೋ ಎನ್ ಜೈಮ್ ಎಂದು ಕರೆಯುತ್ತಾರೆ.

ಸಾವಯವ ಬದುಕು ಇದರ ವತಿಯಿಂದ ವಾಟ್ಸಾಪ್ ಮುಕಾಂತರ ಮಾದರಿ ಬಯೋ ಎನ್ ಜೈಮ್ ತಯಾರಿಕ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ತರಬೇತಿ 10 ದಿನಗಳದ್ದಾಗಿದ್ದು, 10 ದಿನಗಳ ಕಾಲ ಒಂದು ತಾತ್ಕಾಲಿಕ ವಾಟ್ಸಾಪ್ ಗ್ರೂಪ್ ರಚಿಸಲಾಗುವುದು. ಮತ್ತು ತರಬೇತುದಾರರಾಗಿ ಬೆಂಗಳೂರಿನ ವಿಜಯಶಾಂತಿಯವರು ಇದನ್ನು ನಡೆಸಿಕೊಡಲಿದ್ದಾರೆ. ತರಬೇತಿ ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಏನೇ ಸಂಶಯ ಬಂದರೆ ಕೂಡಲೇ ಉತ್ತರಿಸಲಾಗುವುದು. ತರಬೇತಿ ಮುಗಿದ ನಂತರ ಈ ವಾಟ್ಸಾಪ್ ಗ್ರೂಪನ್ನು ಕೂಡಲೇ ಅಳಿಸಲಾಗುವುದು.

ಈ ತರಬೇತಿ ಬಗ್ಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರಲ್ಲಿ ಪ್ರಸ್ತಾವಿಸಿದಾಗ ಅವರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ತಾನೂ ಕೂಡ ಈ ವಾಟ್ಸಾಪ್ ತರಬೇತಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಇದೇ ರೀತಿ ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ಅನುರಾಧ ಅವರು ಕೂಡ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ವಾಟ್ಸಾಪ್‍ನಲ್ಲಿ 256 ಜನರಿಗೆ ಪಾಲ್ಗೊಳ್ಳುವ ಅವಕಾಶವಿದ್ದು, ಸಾರ್ವಜನಿಕರಿಗೆ ಉಚಿತವಾಗಿ ಹೆಸರನ್ನು ನೊಂದಾಯಿಸಬೇಕಾದಲ್ಲಿ ನೋಂದಾವಣೆ ಅರ್ಜಿಗಳು ಶ್ರೀ ಸಂಜೀವಿನಿ ಎಂಟರ್‍ಪ್ರಾಯ್ಸಸ್, ಶೋಲ್ ಅಪಾರ್ಟ್‍ಮೆಂಟ್, ಸುದರ್ಶನ್ ರೆಸಿಡೆನ್ಸಿ ಬಳಿ, ಕಾಡಬೆಟ್ಟು ಉಡುಪಿ (ಮೊಬೈಲ್ 9880886898) ಇಲ್ಲಿ ಪಡೆಯಲು ಅವಕಾಶವಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಫೆಲಿಕ್ಸ್ ಆಳ್ವಾ, ಪ್ರಭಾಕರ ಭಟ್, ಡೆನಿಸ್ ಆಳ್ವ, ಅಗಸ್ಟಿನ್ ಮೆಂಡೊನ್ಸಾ ಉಪಸ್ಥಿತರಿದ್ದರು.


Spread the love