ಹತಾಶೆಯಿಂದ ಪ್ರಮೋದ್ ಮಧ್ವರಾಜರ ವಿರುದ್ದ ಬಿಜೆಪಿ ಅಪಪ್ರಚಾರ: ಉಡುಪಿ ಜಿಲ್ಲಾ ಕಾಂಗ್ರೆಸ್

Spread the love

ಹತಾಶೆಯಿಂದ ಪ್ರಮೋದ್ ಮಧ್ವರಾಜರ ವಿರುದ್ದ ಬಿಜೆಪಿ ಅಪಪ್ರಚಾರ: ಉಡುಪಿ ಜಿಲ್ಲಾ ಕಾಂಗ್ರೆಸ್

ಉಡುಪಿ: ಭ್ರಷ್ಟಾಚಾರ ರಹಿತ, ಪ್ರಾಮಾಣಿಕ ಸೇವೆಯೊಂದಿಗೆ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ  ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜರ ಮೇಲೆ ಬಿಜೆಪಿ ಸುಳ್ಳು ಆರೋಪ ಮಾಡುತ್ತಿರುವುದು ಹತಾಶ ಮನೋಭಾವದಿಂದ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ

 ಪ್ರಮೋದ್ ಮಧ್ವರಾಜ್‍ರವರು ಮೀನುಗಾರಿಕಾ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರಾಗಿ ಉಡುಪಿ ಕ್ಷೇತ್ರಕ್ಕೆ ಸುಮಾರು 2000 ಕೋಟಿಗೂ ಅಧಿಕ ಅನುದಾನವನ್ನು ತಂದು ಉಡುಪಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿರುತ್ತಾರೆ. ಸಚಿವರು ಈಗಾಗಲೇ ಜನರ ಮನದಲ್ಲಿ ತಮ್ಮ ಸ್ಥಾನವನ್ನು ಭದ್ರಗೊಳಿಸಿರುವುದನ್ನು ಗಮನಿಸಿ ಬಿಜೆಪಿ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಜನರ ಮನಸ್ಸಿನಲ್ಲಿ ಸಂಶಯದ ಬೀಜವನ್ನು ಬಿತ್ತುವ ಷಡ್ಯಂತ್ರ ರೂಪಿಸುತ್ತಿದೆ.

ಸಚಿವರ ಮೇಲೆ ಆರೋಪ ಮಾಡುವವರು ದಾಖಲೆ ಸಮೇತ ಮಾಡಬೇಕು ವಿನಃ ಹಿಂಬಾಗಿಲ ಮೂಲಕ ಚಾರಿತ್ರ್ಯ ಹರಣ ಮಾಡುತ್ತಿರುವುದು ನಾಚಿಕೆಗೇಡಿನ ವಿಷಯ. ಮಾನ್ಯ ಸಚಿವರು ತಮ್ಮ ವ್ಯವಹಾರದ ಬಗ್ಗೆ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಯಾವುದೇ ತನಿಖೆಗೆ ಸಿದ್ಧ ಎಂದು ಹೇಳಿಕೆ ನೀಡಿರುವಾಗ, ಸಿಂಡಿಕೇಟ್ ಬ್ಯಾಂಕ್‍ನ ಡಿ.ಜಿ.ಎಂ. ಶ್ರೀಯುತ ಸತೀಶ್ ಕಾಮತ್‍ರವರು ಮಲ್ಪೆ ಬ್ಯಾಂಕ್‍ನಲ್ಲಿ ವಂಚನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿರುವಾಗ ಬಿಜೆಪಿಯ ಈ ಷಡ್ಯಂತ್ರ ಖಂಡನೀಯ. ಮುಂಬರುವ ಚುನಾವಣೆಯಲ್ಲಿ ಸಚಿವರ ಎದುರು ಸ್ಪರ್ಧಿಸಿ ಜಯಗಳಿಸುವುದು ಅಸಾಧ್ಯ ಎಂಬ ಅರಿವು ಬಂದ ಕೂಡಲೇ ಬಿಜೆಪಿ ಈ ಸುಳ್ಳನ್ನು ಪ್ರಚಾರದ ಅಸ್ತ್ರವಾಗಿ ಬಳಸುತ್ತಿದೆ.

ಶಿರೂರು ಶ್ರೀಗಳು ಪ್ರಮೋದ್ ಮಧ್ವರಾಜರ ಅಭಿವೃದ್ಧಿ ಚಿಂತನೆ, ಪ್ರಾಮಾಣಿಕತೆ ಹಾಗೂ ಸಚ್ಚಾರಿತ್ರ್ಯದ ಬಗ್ಗೆ ಅಭಿಮಾನದಿಂದ ಅವರ ಕಾರ್ಯವೈಖರಿಯನ್ನು ಪ್ರಶಂಸಿಸಿರಬಹುದು ಆದರೆ ಶ್ರೀಗಳ  ರಾಜಕೀಯ ಪ್ರವೇಶಕ್ಕೂ ಕಾಂಗ್ರೆಸ್ ಪಕ್ಷಕ್ಕೂ  ಯಾವುದೇ ಸಂಬಂಧವಿಲ್ಲ. ಶಿರೂರು ಶ್ರೀಗಳು ಬಿಜೆಪಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಬೆನ್ನಿಗೆ ಬಿಜೆಪಿಯಲ್ಲಿನ ಸ್ಪರ್ಧಾಳುಗಳಿಗೆ ನಡುಕ ಹುಟ್ಟಿ ಗೊಂದಲವನ್ನು ಸೃಷ್ಟಿಮಾಡುವ ಷಡ್ಯಂತ್ರ ನಡೆಯುತ್ತಿದೆ. ಇಂತಹ ಸುಳ್ಳು ಪ್ರಚಾರಗಳಿಗೆ ಉಡುಪಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಎಂದಿಗೂ ಸೊಪ್ಪು ಹಾಕಲಾರರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಜನಾರ್ದನ ತೋನ್ಸೆ, ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶ್ರೀ ದಿನೇಶ್ ಪುತ್ರನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಬಿ. ನರಸಿಂಹ ಮೂರ್ತಿ, ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love