ಹರೇಕಳದಲ್ಲಿ ಪ್ರಾರಂಭಗೊಂಡಿರುವ ಅನಧಿಕೃತ ಮದ್ಯದಂಗಡಿ ಬಂದ್ ಮಾಡುವಂತೆ ಡಿವೈಎಫ್ಐ ಒತ್ತಾಯ
ತೊಕ್ಕೊಟ್ಟು: ಹರೇಕಳ ಗ್ರಾಮದ ಗ್ರಾಮ ಚಾವಡಿ ಜಂಕ್ಷನ್ ಬಳಿ ಅನಧಿಕೃತವಾಗಿ ತೆರೆದಿರುವ ಮದ್ಯದಂಗಡಿಯನ್ನು ಕೂಡಲೇ ಬಂದ್ ಮಾಡುವಂತೆ ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ ಒತ್ತಾಯಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಹರೇಕಳ ಡಿವೈಎಫ್ಐ ಮುಖಂಡ ರಫೀಕ್ ಹರೇಕಳ , ಸ್ಥಳೀಯ ಗ್ರಾಮ ಪಂಚಾಯತಿಯ ಪರವಾನಿಗೆಯನ್ನು ಪಡೆಯದೇ ಗ್ರಾಮದಲ್ಲಿ ಅಕ್ರಮ ಮದ್ಯದಂಗಡಿ ತೆರೆಯಲಾಗಿದೆ. ಇದರ ಪಕ್ಕದಲ್ಲೇ ಶಾಲೆ , ಮಹಿಳಾ ಹೊಲಿಗೆ ತರಬೇತಿ ಕೇಂದ್ರ , ಧಾರ್ಮಿಕ ಕೇಂದ್ರಗಳು ಹಾಗೂ ಜನವಸತಿ ಪ್ರದೇಶ ಇರುವುದರಿಂದ ಮುಂದೆ ಬಹಳಷ್ಟು ಸಮಸ್ಯೆಗಳು ಉದ್ಬವಿಸಲಿವೆ ಎಂಬ ಆತಂಕ ಸ್ಥಳೀಯರಲ್ಲಿ ಮನೆಮಾಡಿವೆ. ಮಾತ್ರವಲ್ಲ ಇಲ್ಲಿ ಹೆಚ್ಚಾಗಿ ಕೂಲಿ ಕೆಲಸ ಮಾಡಿ ಬದುಕುವ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರೇ ಹೆಚ್ಚಾಗಿ ವಾಸಿಸುತ್ತಿರುವುದರಿಂದ ಮುಂದೆ ಅವರು ಮದ್ಯದ ದಾಸ್ಯಕ್ಕೆ ತುತ್ತಾಗಿ ಕುಟುಂಬ ಸಹಿತ ಬೀದಿಪಾಲಾಗುವ ಭಯವು ಮಹಿಳೆಯರನ್ನು ಕಾಡತೊಡಗಿದೆ. ಅಲ್ಲದೆ ಶಿಕ್ಷಣ ಕೇಂದ್ರಗಳ ಬಳಿ ಮದ್ಯದಂಗಡಿ ತೆರೆಯಬಾರದೆಂಬ ಕಾನೂನು ಇದ್ದರೂ ಅದೆಲ್ಲವನ್ನ ಗಾಳಿಗೆ ತೂರಿ ಅನಧಿಕೃತವಾಗಿ ಮದ್ಯದಂಗಡಿ ಪ್ರಾರಂಭಗೊಂಡಿರುತ್ತದೆ. ಈಗಾಗಲೇ ಈ ರೀತಿ ದಿಢೀರನೆ ಪ್ರಾರಂಭಗೊಂಡಿರುವ ಮದ್ಯದಂಗಡಿಯನ್ನು ಮುಚ್ಚಲು ಒತ್ತಾಯಿಸಿ ಇಂದು ಊರ ನಾಗರಿಕರು ಪ್ರತಿಭಟನೆಯನ್ನು ಹಮ್ಮಿಕೊಂಡಿರುತ್ತಾರೆ. ಈ ಪ್ರತಿಭಟನೆಯನ್ನು ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ ಬೆಂಬಲಿಸಿವೆ ಮುಂದೆ ಸಮಸ್ಯೆ ಇತ್ಯರ್ಥಗೊಳ್ಳುವವರೆಗೂ ಊರ ನಾಗರಿಕರ ಸಹಕಾರದೊಂದಿಗೆ ಹೋರಾಟ ಕೈಗೊಳ್ಳಲಿವೆ ಎಂಬ ಎಚ್ಚರಿಕೆಯನ್ನು ನೀಡಿರುತ್ತಾರೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ಪ್ರಾರಂಭಗೊಂಡಿರುವ ಅನಧಿಕೃತ ಮದ್ಯದಂಗಡಿಯನ್ನು ಮುಚ್ಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.