ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆ ವಿರೋಧಿಸುವವರ ವಿರುದ್ದ ಶಿಸ್ತು ಕ್ರಮ ; ಯಡ್ಯೂರಪ್ಪ
ಉಡುಪಿ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭಾರತೀಯ ಜನತಾ ಪಕ್ಷವನ್ನು ಸೇರುವುದಕ್ಕೆ ವಿರೋಧಿಸುವ ವ್ಯಕ್ತಿಗಳ ವಿರುದ್ದ ಪಕ್ಷದ ವತಿಯಿಂದ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡ್ಯೂರಪ್ಪ ಎಚ್ಚರಿಸಿದ್ದಾರೆ.
ಅವರು ಸೋಮವಾರ ಮಣಿಪಾಲದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಒರ್ವ ಸಜ್ಜನ, ಹಾಗೂ ಪ್ರಭಾವಿ ರಾಜಕಾರಣಿಯಾಗಿದ್ದು, ನಮ್ಮ ಸರಕಾರದ ಅವಧಿಯಲ್ಲಿ ಕೈಗೊಂಡ ಕೆಲವೊಂದು ತಪ್ಪು ನಿರ್ಧಾರಗಳಿಂದ ಬೇಸರಪಟ್ಟು ಪಕ್ಷದಿಂದ ಹೊರಹೋಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಆದರೂ ಕೂಡ ಅವರು ತಮ್ಮ ಬೆಂಬಲವನ್ನು ಸದಾ ಬಿಜೆಪಿ ಪಕ್ಷಕ್ಕೆ ನೀಡಿದ್ದರು. ಕೆಲವೊಂದು ತಾಂತ್ರಿಕ ಕಾರಣಗಳಿಗಾಗಿ ಪ್ರಸ್ತುತ ಅವರು ಬಿಜೆಪಿ ಸೇರ್ಪಡೆ ಸಾಧ್ಯವಿಲ್ಲ ಆದರೆ ಡಿಸೆಂಬರ್ ಬಳಿಕ ಅವರು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಂಡು ಬಿಜೆಪಿ ಪರವಾಗಿ ಕೆಲಸ ಮಾಡಲಿದ್ದಾರೆ.
ಹಾಲಾಡಿ ಎಂದೂ ಕೂಡ ಸ್ಥಾನಮಾನಕ್ಕಾಗಿ ಆಸೆಪಡದೆ ಮೌನವಾಗಿ ತಮ್ಮ ಸೇವೆಯನ್ನು ಕ್ಷೇತ್ರದ ಜನತೆಗೆ ನೀಡಿಕೊಂಡು ಬಂದಿದ್ದಾರೆ. ಅವರ ಸೇರ್ಪಡೆಗೆ ಪಕ್ಷದಲ್ಲಿ ಯಾವುದೇ ರೀತಿಯ ವಿರೋಧ ಇಲ್ಲ. ಅಂತಹ ಯಾವುದೇ ವಿರೋಧ ಮಾಡುವವರ ವಿರುದ್ದ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿದೆ. ಯಾವುದೇ ಭಿನ್ನಭಿಪ್ರಾಯಗಳಿದ್ದಲ್ಲಿ ಅದನ್ನು ತನಗೆ ವೈಯುಕ್ತಿವಾಗಿ ತಿಳಿಸಲಿ ಅದನ್ನು ಬಿಟ್ಟು ಅವರ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.