ಹಿರಿಯಡ್ಕ ದನದ ವ್ಯಾಪಾರಿ ಸಾವು: ಎಸ್ಐ ಸೇರಿ 6 ಮಂದಿಗೆ ಜೂ.15ರ ತನಕ ನ್ಯಾಯಾಂಗ ಬಂಧನ

Spread the love

ಹಿರಿಯಡ್ಕ ದನದ ವ್ಯಾಪಾರಿ ಸಾವು: ಎಸ್ಐ ಸೇರಿ 6 ಮಂದಿಗೆ ಜೂ.15ರ ತನಕ ನ್ಯಾಯಾಂಗ ಬಂಧನ

ಉಡುಪಿ: ಪೆರ್ಡೂರು ಸಮೀಪ ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೇನಬ್ಬ(62) ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿಬಂಧಿತ ಆರೋಪಿಗಳಾದ ಹಿರಿಯಡ್ಕ ಪೊಲೀಸ್ ಉಪನಿರೀಕ್ಷಕ ಡಿ.ಎನ್. ಕುಮಾರ್(53) ಹಾಗೂ ಇಬ್ಬರು ಪೊಲೀಸರು ಮತ್ತು ಮೂವರು ಬಜರಂಗದಳ ಕಾರ್ಯಕರ್ತರನ್ನು ಜೂನ್ 15ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ ನಿಂಬರಗಿ ಮಾಹಿತಿ ನೀಡಿದರು.

ಜಿಲ್ಲಾ ಪೋಲಿಸ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಮೇ 29/30 ರಂದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಆರೋಪಿಗಳು ನೀಡಿದ ಖಚಿತ ಮಾಹಿತಿ ಮೇರೆಗೆ ಆರೋಪಿಗಳು ಹಾಗೂ ಪೊಲೀಸರು ಹಿರಿಯಡ್ಕ ಠಾಣೆ ವ್ಯಾಪ್ತಿಯ ಶೇನರಬೆಟ್ಟು ಎಂಬಲ್ಲಿ ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಅಕ್ರಮ ದನ ಸಾಗಾಟದ ವಾಹನಕ್ಕಾಗಿ ಕಾದು ಕುಳಿತಿದ್ದರು. ಶೇನರಬೆಟ್ಟು ಕಡೆಯಿಂದ ಪೆರ್ಡೂರು ಕಡೆಗೆ ಬರುತ್ತಿದ್ದ ವಾಹನವನ್ನು ಆರೋಪಿಗಳು ಪೊಲೀಸರ ಸಮಕ್ಷಮ ತಡೆದ ಸಂದರ್ಭ ಅದರಲ್ಲಿದ್ದ ಇಬ್ಬರು ಓಡಿ ಹೋಗಿದ್ದರು. ಓರ್ವ ಅಕ್ರಮ ದನ ಸಾಗಾಟದ ಆರೋಪಿ ಹುಸೈನಬ್ಬ (62) ಆರೋಪಿಗಳ ಕೈಗೆ ಸಿಕ್ಕಿ ಹಾಕಿಕೊಂಡಿದ್ದರು. ಆ ಸಮಯ ಆರೋಪಿಗಳು ವಾಹನವನ್ನು ಧ್ವಂಸಗೊಳಿಸಿ ಹುಸೈನಬ್ಬ ಅವರಿಗೆ ಹಲ್ಲೆ ನಡೆಸಿ ಆತನನ್ನು ಪೊಲೀಸರ ವಶಕ್ಕೆ ನೀಡಿದ್ದರು.

ಪೊಲೀಸರು ಹುಸೈನಬ್ಬನನ್ನು ಇಲಾಖಾ ಜೀಪಿನಲ್ಲಿ ಹಾಗೂ ದನ ಸಾಗಾಟದ ವಾಹನವನ್ನು ಆರೋಪಿಗಳ ಪೈಕಿ ಸೂರಿ @ ಸುರೇಶ ಹಾಗೂ ಇತರರು ಠಾಣೆಯ ಬಳಿ ತಂದಿದ್ದು, ಆಗ ಜೀಪಿನ ಹಿಂಬದಿ ಕುಳಿತಿದ್ದ ಹುಸೈನಬ್ಬ ಮೃತಪಟ್ಟಿದ್ದು, ಈ ಸಮಯ ಪೊಲೀಸರು ಅಲ್ಲಿಗೆ ಬಂದಿದ್ದ ಆರೋಪಿಗಳ ಪೈಕಿ ಪ್ರಸಾದ್ ಕೊಂಡಾಡಿ ಹಾಗೂ ಇತರ ಆರೋಪಿಗಳೊಂದಿಗೆ ಸೇರಿ ಮೃತ ದೇಹವನ್ನು ಕೃತ್ಯ ನಡೆದ ಸ್ಥಳದಿಂದ ಸುಮಾರು ಒಂದು ಕಿಲೋ ಮೀಟರ್ ದೂರ ಇಟ್ಟು ಬಂದಿದ್ದು, ನಂತರ ಬೆಳಿಗ್ಗೆ 09:45 ಗಂಟೆಗೆ ಸದ್ರಿ ಹುಸೈನಬ್ಬನು ದನದ ವಾಹನವನ್ನು ತಡೆಗಟ್ಟಿದ ಸಮಯ ಓಡಿ ತಪ್ಪಿಸಿಕೊಂಡಾಗ ಭಯದಿಂದ ಹೃದಯಾಘಾತಗೊಂಡು ಮೃತಪಟ್ಟಿರಬಹುದು ಎಂಬುದಾಗಿ ಅಸಹಜ ಸಾವು ಪ್ರಕರಣವನ್ನು ಠಾಣೆಯಲ್ಲಿ ದಾಖಲಿಸಿಕೊಂಡಿರುತ್ತಾರೆ.

ಪ್ರಕರಣಕ್ಕೆ ಸಂಬಂಧಿಸಿ ಜೂ. 1 ರಂದು ಬಳ್ಳಾರಿ ಜಿಲ್ಲಾ ಪೊಲೀಸರ ಸಹಾಯದಿಂದ ಸುರೇಶ್ ಮೆಂಡನ್ (42), ಪ್ರಸಾದ್ ಕೊಂಡಾಡಿ (30) ಎಂಬವರನ್ನು ಹಿರಿಯಡ್ಕ ಬೊಮ್ಮರಬೆಟ್ಟಿನಲ್ಲಿ ಬಂಧಿಸಿ, ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆಯಲಾಗಿತ್ತು. ಜೂ.2ರಂದು ಉಡುಪಿಗೆ ಕರೆ ತಂದಿದ್ದು, ಉಡುಪಿಯಲ್ಲಿ ಉಮೇಶ್ ಶೆಟ್ಟಿ (28), ರತನ್ (22) ಎಂಬವರನ್ನು ಹಿರಿಯಡ್ಕದಲ್ಲಿ ಬಂಧಿಸಿ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಅಂದು ಈ ಪ್ರಕರಣದಲ್ಲಿ ಭಾಗಿಯಾದ ಹಿರಿಯಡ್ಕ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಡಿ.ಎನ್. ಕುಮಾರ್, ಜೀಪು ಚಾಲಕ ಗೋಪಾಲ್, ಹೆಡ್ಕಾಸ್ಟೆಬಲ್ ಮೋಹನ್ ಕೊತ್ವಾಲ್ ಸಹಿತ 3 ಸಿಬ್ಬಂದಿ ಬಂಧಿಸಲಾಗಿದೆ. ಭಾನುವಾರ ಬಜರಂಗದಳದ ಪೆರ್ಡೂರು ಪಕಾಲು ನಿವಾಸಿ ಚೇತನ್ ಯಾನೆ ಚೇತನ್ ಆಚಾರ್ಯು (22), ಪೆರ್ಡೂರು ಅಲಂಗಾರು ಶೈಲೇಶ್ ಶೆಟ್ಟಿ (20), ಕೊೖತ್ಯಾರ್ ಕೆನ್ನೆತ್ಬೈಲು ನಿವಾಸಿ ಗಣೇಶ್ ನಾಯ್ಕ (24) ಎಂಬುವವರನ್ನು ಬಂಧಿಸಲಾಗಿದೆ

ಹಿರಿಯಡ್ಕ ಪೊಲೀಸ್ ಉಪನಿರೀಕ್ಷಕ ಡಿ.ಎನ್. ಕುಮಾರ್, ಹೆಡ್ಕಾನ್ ಸ್ಟೇಬಲ್ ಮೋಹನ್ ಕೊತ್ವಾಲ್ ಹಾಗೂ ಠಾಣಾ ಜೀಪು ಚಾಲಕ ಗೋಪಾಲ್ ಅವರನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಜೂ.3ರಂದು ತಡ ರಾತ್ರಿ ಉಡುಪಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಧೀಶರು ಜೂ.15ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ. ನಂತರ ಅವರನ್ನು ಬಿಗಿ ಭದ್ರತೆಯಲ್ಲಿ ಕಾರವಾರ ಜೈಲಿಗೆ ಕರೆದೊಯ್ಯಲಾಗಿದೆ.

ಸೋಮವಾರ ಬೆಳಗ್ಗೆ ಬಜರಂಗದಳದ ಕಾರ್ಯಕರ್ತರಾದ ಪೆರ್ಡೂರು ಪಕಾಲು ನಿವಾಸಿ ಚೇತನ್ ಆಚಾರ್ಯ(22), ಪೆರ್ಡೂರು ಅಲಂಗಾರಿನ ಶೈಲೇಶ್ ಶೆಟ್ಟಿ(20), ಪೆರ್ಡೂರು ಕೆನ್ನೆತ್ಬೈಲುವಿನ ಗಣೇಶ್ ನಾಯ್ಕ(24) ಎಂಬವರನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇವರಿಗೆ ಜೂ.15ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಲಾಗಿದೆ. ನಂತರ ಇವರನ್ನೂ ಕಾರವಾರ ಜೈಲಿಗೆ ರವಾನಿಸಲಾಯಿತು.

ಒಟ್ಟು 10 ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬ. ನಿಂಬರಗಿ ತಿಳಿಸಿದ್ದಾರೆ.

ಎಡಿಶನಲ್ ಎಸ್ಪಿ ಕಾರ್ಕಳ ಹೃಷಿಕೇಶ್ ಸೋನಾವಾನೆ, ಮತ್ತು ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಉಪಸ್ಥಿತರಿದ್ದರು.


Spread the love