ಹೆಚ್.ಐ.ವಿ ಸೋಂಕಿತರು ಸರಕಾರಿ ಸೌಲಭ್ಯಗಳಿಗೆ ಎಆರ್ಟಿ ಸೆಂಟರ್ ಮೂಲಕ ಅರ್ಜಿ ಸಲ್ಲಿಸಿ- ಡಿಸಿ ಪ್ರಿಯಾಂಕ ಮೇರಿ

Spread the love

ಹೆಚ್.ಐ.ವಿ ಸೋಂಕಿತರು ಸರಕಾರಿ ಸೌಲಭ್ಯಗಳಿಗೆ ಎಆರ್ಟಿ ಸೆಂಟರ್ ಮೂಲಕ ಅರ್ಜಿ ಸಲ್ಲಿಸಿ- ಡಿಸಿ ಪ್ರಿಯಾಂಕ ಮೇರಿ

ಉಡುಪಿ: ಹೆಚ್.ಐ.ವಿ ಸೋಂಕಿತರು ಸರ್ಕಾರದ ವಿವಿಧ ಸೌಲಭ್ಯಗಳಿಗಾಗಿ , ವಿವಿಧ ಇಲಾಖೆಗಳಿಗೆ ಪದೇ ಪದೇ ಅಲೆಯುವ ಬದಲು ತಾವು ಚಿಕಿತ್ಸೆ ಒಡೆಯುವ ಎ.ಆರ್.ಟಿ ಸೆಂಟರ್ ಗಳಲ್ಲಿ ಅರ್ಜಿ ಸಲ್ಲಿಸಿದಲ್ಲಿ ,ಅವುಗಳನ್ನು ಸಂಬಂದಪಟ್ಟ ಇಲಾಖೆಗಳಿಗೆ ಕಳುಹಿಸಿ, ಸೋಂಕಿತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದರು.

ಅವರು ಸೋಮವಾರ , ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ , ಜಿಲ್ಲೆಯಲ್ಲಿರುವ ಹೆಚ್.ಐ.ವಿ. ಸೋಂಕಿತ ಮತ್ತು ಭಾದಿತರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೆಚ್.ಎಚ್.ವಿ ಪೀಡಿತರು ಸರಕಾರಿ ಸೌಲಭ್ಯಗಳಿಗೆ ಸರ್ಕಾರಿ ಕಚೇರಿಗಳಿಗೆ ತೆರಳಿದಾಗ ಅವರಿಗೆ ಸೋಂಕು ಇರುವುದು ಬಹಿರಂಗವಾಗುವ ಸಾದ್ಯತೆ ಇದ್ದು ಮತ್ತು ಅನಾರೋಗ್ಯದಿಂದ ಬಳಲುವ ಅವರು ಕಚೇರಿಗೆ ಅಲೆದಾಡುವುದು ತ್ರಾಸದಾಯಕವಾಗಿದ್ದು, ಇದನ್ನು ತಪ್ಪಿಸುವ ಸಲುವಾಗಿ ಅವರು ಚಿಕಿತ್ಸೆಗೆ ಹಾಜರಾಗುವ ಎ.ಆರ್.ಟಿ ಸೆಂಟರ್ ಗಳಲ್ಲಿ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ , ತಮಗೆ ಅಗತ್ಯವಿರುವ ಸೌಲಭ್ಯಗಳನ್ನು ಮಂಜೂರು ಕೋರಿ ಅರ್ಜಿ ಸಲ್ಲಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ, ಈ ಅರ್ಜಿಗಳನ್ನು ಸಂಬಂದಪಟ್ಟ ಇಲಾಖೆಗಳಿಗೆ ಕಳುಹಿಸಿ ಅವರಿಗೆ ಸೂಕ್ತ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗೆ ಸೂಚಿಸಿದರು.

ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ವತಿಯಿಂದ ಧನಶ್ರೀ ಯೋಜನೆಯಡಿ 2016-17 ರಲ್ಲಿ 26 ಮಂದಿಗೆ ಮತ್ತು 2017-18 ರಲ್ಲಿ ಅರ್ಜಿ ಸಲ್ಲಿಸಿರುವ 38 ಮಂದಿಗೆ ಸಾಲ ಮಂಜೂರು ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ತಿಳಿಸಿದರು, ಹೆಚ್ಚಿನ ಸೋಂಕಿತರು ಅನಾರೋಗ್ಯದ ಕಾರಣದಿಂದ ಸಾಲ ಮರುಪಾವತಿ ಮಾಡಲು ಶಕ್ತರಿಲ್ಲದ ಕಾರಣ, ರೈತರಿಗೆ ಕೃಷಿ ಸಾಲ ಮನ್ನಾ ಮಾಡಿದ ರೀತಿಯಲ್ಲಿ ತಮ್ಮ ಸಾಲವನ್ನೂ ಮನ್ನಾ ಮಾಡುವಂತೆ ಸೋಂಕಿತರು ಜಿಲ್ಲಾಧಿಕಾರಿಗಳನ್ನು ಕೋರಿದರು, ಸಾಲ ಮನ್ನಾ ಮಾಡುವ ಕುರಿತಂತೆ ನಿಗಮಕ್ಕೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ವಿಶೇಷ ವರ್ಗ ಯೋಜನೆಯಡಿಯಲ್ಲಿ, ಹೆಚ್ಐವಿ ಸೋಂಕಿತ ಕುಟುಂಬದವರಿಗೆ ಜಿಲ್ಲಾಡಳಿತ ಮತ್ತು ರಾಜೀವ್ಗಾಂಧಿ ಗ್ರಾಮೀಣ ವಸತಿ ನಿಗಮದ ಸಹಯೋಗದಲ್ಲಿ, 2014-15 ರಲ್ಲಿ 36 ಮಂದಿಗೆ 2016-17 ರಲ್ಲಿ 63 ಮಂದಿಗೆ , 2017-18 ರಲ್ಲಿ 33 ಮಂದಿಗೆ ವಸತಿ ಸೌಲಭ್ಯ ನೀಡಲಾಗಿದ್ದು, ಅರ್ಹರಿಗೆ ನಿವೇಶನ ಗುರುತಿಸುವ ಕುರಿತಂತೆ ಹಾಗೂ ಆರ್.ಟಿ.ಸಿ ಗೆ ಸಂಬಂದಪಟ್ಟ

ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಎಲ್ಲಾ ತಹಸೀಲ್ದಾರ್ ಗಳಿಗೆ ಸೂಚಿಸಿದ ಡಿಸಿ, ಜಿಲ್ಲೆಯಲ್ಲಿ ಪ್ರಸ್ತುತ ನಿವೇಶನ ರಹಿತರು ಮತ್ತು ವಸತಿ ರಹಿತರ ಸಮೀಕ್ಷೆ ನಡೆಯುತ್ತಿದ್ದು, ನಿವೇಶನ ಮತ್ತು ವಸತಿ ರಹಿತ ಎಲ್ಲಾ ಹೆಚ್ಐವಿ ಸೋಂಕಿತರು ಸಂಬಂದಪಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೆಸರು ಸೇರ್ಪಡೆ ಮಾಡುವಂತೆ ತಿಳಿಸಿದರು.

ಉಡುಪಿ ಹಾಗೂ ಕುಂದಾಪುರದ ಎ.ಆರ್.ಟಿ ಸೆಂಟರ್ ಗಳಲ್ಲಿ ಹೆಚ್ಐವಿ ಸೋಂಕಿತರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ಕಾನೂನು ನೆರವು ನೀಡಲಾಗುತ್ತಿದ್ದು, ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಆರೋಗ್ಯ ಕರ್ನಾಟಕ ಯೋಜನೆಯಲ್ಲಿ, ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯುವ ಕುರಿತಂತೆ ಸೋಂಕಿತರಿಗೆ ವಿವರಿಸಿದ ಜಿಲ್ಲಾಧಿಕಾರಿಗಳು ,ನೊಂದಾಯಿತ ಆಸ್ಪತ್ರೆಗಳ ಪಟ್ಟಿ ಮತ್ತು ವಿವರಗಳನ್ನು ಎಲ್ಲ ಎನ್.ಜಿ.ಓ ಗಳಿಗೆ ಮತ್ತು ಎ.ಆರ್.ಟಿಸೆಂಟರ್ ಗಳ ಮೂಲಕ ವಿತರಿಸುವಂತೆ ಸೂಚಿಸಿದರು.
ಜಿಲ್ಲೆಯ ಖಾಸಗಿ ಬಸ್ ಗಳಲ್ಲಿ ಹೆಚ್.ಐ.ವಿ ಸೋಂಕಿತರಿಗೆ ನೀಡುತ್ತಿರುವ ರಿಯಾಯತಿ ಬಸ್ ಪಾಸ್ನಲ್ಲಿ , ಅವರ ಸೊಂಕಿನ ಕುರಿತು ಗೋಪ್ಯತೆ ಕಾಪಾಡುವಂತೆ ಹಾಗೂ ವಿಶೇಷ ವಿನ್ಯಾಸದ, ಉತ್ತಮ ಗುಣಮಟ್ಟದ ಪಾಸ್ಗಳನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚಿಸಿದರು.

ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಡಿ ಗ್ರೂಫ್ ನೌಕರರ ನೇಮಕ ಸಂದರ್ಭದಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಆದ್ಯತೆ ನೀಡುವಂತೆ ಎಲ್ಲಾ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿದ್ದ ಪ್ರತಿಯೊಬ್ಬ ಹೆಚ್.ಐ.ವಿ. ಸೊಂಕಿತರ ಸಮಸ್ಯೆಗಳನ್ನು ವಿವರವಾಗಿ ಆಲಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ, ಸಮಸ್ಯೆಗಳ ವಿವರಗಳನ್ನು ನೀಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಹೆಚ್.ಐ.ವಿ ನಿಯಂತ್ರಣದಲ್ಲಿ ತೊಡಗಿರುವ ವಿವಿಧ ಎನ್.ಜಿ.ಓ ಸಂಘಟನೆಗಳ ಪ್ರತಿನಿಧಿಗಳು
ಉಪಸ್ಥಿತರಿದ್ದರು.


Spread the love