ಹೆದ್ದಾರಿ ಕಾಮಗಾರಿ ತ್ವರಿತಗೊಳಿಸಲು ಸಂಸದ ನಳಿನ್ ಕುಮಾರ್ ಕಟೀಲು ಸೂಚನೆ 

Spread the love

ಹೆದ್ದಾರಿ ಕಾಮಗಾರಿ ತ್ವರಿತಗೊಳಿಸಲು ಸಂಸದ ನಳಿನ್ ಕುಮಾರ್ ಕಟೀಲು ಸೂಚನೆ 

ಮಂಗಳೂರು : ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಬಂಧಿಸಿದ ಮಂಜೂರಾಗಿರುವ ಎಲ್ಲಾ ಯೋಜನೆಗಳ ಕಾಮಗಾರಿಗಳಿಗೆ ವೇಗ ನೀಡಲು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಸೂಚಿಸಿದ್ದಾರೆ.

ಅವರು ಮಂಗಳವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಕಳ-ಮೂಡಬಿದ್ರೆ-ಮಂಗಳೂರು ರಸ್ತೆ, ಬಿ.ಸಿ.ರೋಡು- ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳನ್ನು ತೀವ್ರಗೊಳಿಸಬೇಕು. ಅದೇ ರೀತಿ ಕೋವಿಡ್‍ನಿಂದಾಗಿ ನಿಂತಿರುವ ಇತರೆ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ತಕ್ಷಣವೇ ಕೈಗೆತ್ತಿಕೊಳ್ಳಲು ಸಂಸದರು ತಿಳಿಸಿದರು.

ಉಳ್ಳಾಲ ನೇತ್ರಾವತಿ ಸೇತುವೆ ಜಪ್ಪಿನ ಮೊಗರುವಿನಿಂದ ಕಣ್ಣೂರು ಮಸೀದಿಯವರೆಗೆ ಬೈಪಾಸ್ ನಿರ್ಮಾಣಕ್ಕೆ ಭೂ ಸ್ವಾಧೀನ ಸಮಸ್ಯೆ ಇರುವುದರಿಂದ ಆ ಯೋಜನೆಯನ್ನು ಕೈ ಬಿಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಈ ಯೋಜನೆಯ ಬದಲಿಗೆ ಮಂಗಳೂರು ನಗರದಲ್ಲಿ ಬೇರೆ ರಸ್ತೆ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆ ಲೋಕೋಪಯೋಗಿ ಸಚಿವರಲ್ಲಿ ಚರ್ಚೆ ನಡೆಸುವುದಾಗಿ ತಿಳಿಸಿದರು.

ಇಂಟರ್ ನೆಟ್ ಸಮಸ್ಯೆಯಿಂದ ಶಾಲಾ ಆನ್ ಲೈನ್ ತರಗತಿಗಳಿಗೆ ತೊಂದರೆಯಾಗುತ್ತಿರುವ ದೂರುಗಳು ಬರುತ್ತಿದ್ದು, ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‍ಗಳಲ್ಲಿನ ರಾಜೀವ್ ಗಾಂಧಿ ಸೇವಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿ ಅಗತ್ಯ ವ್ಯವಸ್ಥೆ ಕಲ್ಪಿಸಲು ಸಂಸದರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಮಲ್ಲೇಸ್ವಾಮಿ, ಇಂಟರ್ ನೆಟ್ ಸಮಸ್ಯೆ ಇರುವ ವಿದ್ಯಾರ್ಥಿಗಳ ಮನೆಗೆ ಹೋಗಿ ಪಾಠ ಮಾಡಲು ಶಿಕ್ಷಕರಿಗೆ ಸೂಚಿಸಲಾಗಿದೆ ಎಂದರು.

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಪಚ್ಚನಾಡಿಯಲ್ಲಿ ಕಳೆದ ವರ್ಷ ನಡೆದ ತ್ಯಾಜ್ಯ ದುರಂತದ ಕಾರಣಗಳ ಪರಿಶೀಲಿಸಲು ಅಧಿಕಾರಿಗಳ ತಂಡ ರಚಿಸಲು ಸಂಸದರು ಸೂಚಿಸಿದರು.

ಕೋವಿಡ್ ರೋಗಿಗಳ ಬಿಲ್ ಪರಿಶೀಲನೆ: ಕೋರೋನಾ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಿಲ್ಲುಗಳು ಸರಕಾರ ನಿಗದಿಪಡಿಸಿದ ದರದಲ್ಲಿ ಇದೆಯೋ ಎಂದು ಪರಿಶೀಲಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಪ್ರತ್ಯೇಕ ಘಟಕ ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರು ಸಭೆಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಪ್ರತೀ ದಿನ 4000 ಮಂದಿಯ ಕೋವಿಡ್ ಪರೀಕ್ಷೆ ಮಾಡಲು ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ. ಮಂಗಳೂರು ನಗರಕ್ಕೆ ಬರುವ ಬದಲು ಜಿಲ್ಲೆಯ ಎಲ್ಲಾ ಪಟ್ಟಣ ಪ್ರದೇಶಗಳಲ್ಲಿ ರೋಗ ಲಕ್ಷಣಗಳನ್ನು ಹೊಂದಿರುವವರನ್ನು ಕಂಡುಹಿಡಿದು, ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು. ವೆನ್ ಲಾಕ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಲಭ್ಯವಿಲ್ಲದಿದ್ದಲ್ಲಿ ಖಾಸಗೀ ಆಸ್ಪತ್ರೆಗಳಿಗೆ ರೋಗಿಗಳನ್ನು ರೆಫರಲ್ ಮಾಡಿ ಆಯುಷ್ಮಾನ್ ಅಡಿ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸ್ವಚ್ಛ ಭಾರತ್ ಮಿಷನ್-ಗ್ರಾಮೀಣ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಪ್ರಧಾನಮಂತ್ರಿ ಗ್ರಾಮೀಣ ಅವಾಸ್ ಯೋಜನೆ ಇನ್ನಿತರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಿದ್ದು, ಈ ಎಲ್ಲಾ ಯೋಜನೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ವಿಶೇಷ ಮುತುವರ್ಜಿವಹಿಸಿ ಜನರಿಗೆ ಸೂಕ್ತ ರೀತಿಯಲ್ಲಿ ಒದಗಿಸಿಕೊಡಬೇಕು ಎಂದು ಸಂಸದರು ಹೇಳಿದರು.

ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಂತೆ ಬಳ್ಪ ಗ್ರಾಮವು ಮೂಲಭೂತ ಸೌಕರ್ಯಗಳ ಮೂಲಕ ಅಭಿವೃದ್ಧಿಯನ್ನು ಹೊಂದುತ್ತಿದ್ದು ಈ ವರ್ಷಾಂತ್ಯದೊಳಗೆ ಉಳಿದಿರುವ ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎಂದು ಹೇಳಿದರು. ಕೊರೋನಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲೆಯ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದು ಇದಕ್ಕೆ ಅಭಿನಂದಿಸುವ್ಯದಾಗಿ ನಳಿನ್ ಕುಮಾರ್ ತಿಳಿಸಿದರು.

ನಿವೇಶನ ರಹಿತರಿಗೆ ಸೂರು ಒದಗಿಸುವುದು ಕೇಂದ್ರದ ವಸತಿ ಯೋಜನೆಯ ಉದ್ದೇಶವಾಗಿದ್ದು, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಜಾಗವನ್ನು ಗುರುತಿಸಿ ನಿಗದಿತ ಕಾಲಮಿತಿಯೊಳಗೆ ಸಂಬಂಧಪಟ್ಟ ಅಧಿಕಾರಿಗಳು ಪೂರ್ಣ ಮಾಹಿತಿ ನೀಡಬೇಕು ಎಂದು ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಕುಮಾರ್ ಸೂಚಿಸಿದರು.

ಅಧಿಕಾರಿಗಳು ಪ್ರತಿಯೊಂದು ಕೆಲಸದಲ್ಲಿ ವಿಶೇಷ ಕಾಳಜಿ ವಹಿಸಿ ಜನರ ಸಮಸ್ಯೆಗಳಿಗನುಣವಾಗಿ ವಾಸ್ತವಕ್ಕೆ ಪೂರಕವಾಗುವಂತೆ ಕೆಲಸ ಮಾಡಬೇಕು ಎಂದು ಹೇಳಿದರು.

ವಸತಿ ಸಂಕೀರ್ಣ, ಫ್ಲಾಟ್, ಕಟ್ಟಡಗಳು ಹಾಗೂ ಕಾಂಪ್ಲೆಕ್ಸ್‍ಗಳು ಕಡ್ಡಾಯವಾಗಿ ತ್ಯಾಜ್ಯ ವಿಲೇವಾರಿ ಸಂಸ್ಕರಣೆಯ ಘಟಕವನ್ನು ಒಳಗೊಂಡಿರಬೇಕು. ಇಂತಹ ವ್ಯವಸ್ಥೆಯನ್ನು ಒಳಗೊಂಡಿರುವ ಕಟ್ಟಡಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ರಾಜೇಂದ್ರ ಸೂಚಿಸಿದರು. ಸಮಾಜ ಕಲ್ಯಾಣ ಇಲಾಖೆಯು ಕೇಂದ್ರದ ಸಾಕಷ್ಟು ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಜೊತೆಗೆ ಸೂಕ್ತ ತರಬೇತಿ ನೀಡಬೇಕು ಎಂದರು.

ಸಭೆಯಲ್ಲಿ ಶಾಸಕ ಉಮನಾಥ ಕೋಟ್ಯಾನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸೆಲ್ವಮಣಿಆರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮತ್ತಿತರರು ಉಪಸ್ಥಿತರಿದ್ದರು.


Spread the love