ಹೆಮ್ಮಾಡಿ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನ: ನೂತನ ಶಿಲಾಮಯ ಗುಡಿ ಲೋಕಾರ್ಪಣೆ, ಪುನರ್ ಪ್ರತಿಷ್ಠೆ, ಬ್ರಹ್ಮಕುಂಬಾಭಿಷೇಕ ಮಹೋತ್ಸವ

Spread the love

ಹೆಮ್ಮಾಡಿ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನ: ನೂತನ ಶಿಲಾಮಯ ಗುಡಿ ಲೋಕಾರ್ಪಣೆ, ಪುನರ್ ಪ್ರತಿಷ್ಠೆ, ಬ್ರಹ್ಮಕುಂಬಾಭಿಷೇಕ ಮಹೋತ್ಸವ

ಕುಂದಾಪುರ : ಹೆಮ್ಮಾಡಿಯ ಶ್ರೀ ಲಕ್ಷ್ಮಿನಾರಾಯಣ ದೇವರ ನೂತನ ಶಿಲಾಮಯ ಗುಡಿ ಲೋಕಾರ್ಪಣೆ, ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮಕುಂಬಾಭಿಷೇಕ ಮಹೋತ್ಸವವು ಎ. 20 ರಿಂದ ಆರಂಭಗೊಂಡು, ಎ. 22 ರವರೆಗೆ ವಿಜೃಂಭಣೆಯಿಂದ ನೆರವೇರಲಿದೆ.

ಎ. 20 ರಂದು ಬೆಳಗ್ಗೆ 9 ರಿಂದ ಫಲ ಪ್ರಾರ್ಥನೆ, ಗುರುಗಣಪತಿ ಪೂಜೆ, ಮಹಾಗಣಪತಿ ಹೋಮ, ನವಗ್ರಹ ಹೋಮ, ಭಜನಾ ಕಾರ್‍ಯಕ್ರಮ, ಸಂಜೆ 5 ರಿಂದ ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಬಿಂಬಶುದ್ಧಿ ಕಲಶ ಸ್ಥಾಪನೆ, ಎ. 21 ರಂದು ಬೆಳಗ್ಗೆ 8 ರಿಂದ ಗುರುಗಣೇಶ ಪೂಜೆ, ಪುಣ್ಯಾಹವಾಚನ, ಭಜನೆ, ಶ್ರೀ ಲಕ್ಷ್ಮಿ ನಾರಾಯಣ ದೇವರ ಅಷ್ಟಬಂಧ ಪುನರ್ ಪ್ರತಿಷ್ಠಾ ಮಹೋತ್ಸವ, ಜೀವ ಕುಂಬಾಭಿಷೇಕ, ಮಹಾಪ್ರಾಣ ಪ್ರತಿಷ್ಠಾನ್ಯಾಸಾದಿಗಳು, ಲಕ್ಷ್ಮಿನಾರಾಯಣ ಹೃದಯ ಹೋಮ, ಮಹಾಪೂಜೆ, ಅಪರಾಹ್ನ ಅನ್ನಸಂತರ್ಪಣೆ, ಪ್ರಸಾದ ವಿತರಣೆ, ಸಂಜೆ 5 ರಿಂದ ಶಾಂತಿ ಹೋಮ, ಪ್ರಾಯಶ್ಚಿತ ಹೋಮ, ಸಹಸ್ರ ಪರಿಕಲಶೈಃ ಸಹ ಕಲಾತತ್ವ ಬ್ರಹ್ಮಕಲಶ ಸ್ಥಾಪನೆ, ಅಷ್ಟಾವಧಾನ ಸೇವೆ, ಪ್ರಸನ್ನ ಪೂಜೆ ನಡೆಯಲಿದೆ.

ಧಾರ್ಮಿಕ ಸಭೆ

ಸಂಜೆ 6 ಕ್ಕೆ ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಜೋತಿಷಿ ವಿದ್ವಾನ್ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ| ಜಿ.ಶಂಕರ್, ಉದ್ಯಮಿ ಕೃಷ್ಣಮೂರ್ತಿ ಮಂಜ, ಕೊಲ್ಲೂರು ದೇಗುಲದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಆನೆಗುಡ್ಡೆಯ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಮತ್ತಿತರರು ಭಾಗವಹಿಸಲಿದ್ದಾರೆ.

ಎ. 22 ರಂದು ಬೆಳಗ್ಗೆ 9 ರಿಂದ ಗುರುಗಣೇಶ ಪೂಜೆ, ಪುಣ್ಯಾಹವಾಚನ, ಬೆಳಗ್ಗೆ 10.45 ಕ್ಕೆ ಶ್ರೀ ಶೃಂಗೇರಿ ಶಾರದಾ ಪೀಠದ ಕಿರಿಯ ಯತಿಗಳಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರು ರಜತ ಕವಚವನ್ನು ಸಮರ್ಪಿಸಿ, ಶ್ರೀ ದೇವರಿಗೆ ಬ್ರಹ್ಮಕುಂಬಾಭಿಷೇಕ, ಮಹಾಪೂಜೆ ನೆರವೇರಿಸಲಿದ್ದಾರೆ. ಬಳಿಕ ೧೧ ಗಂಟೆಗೆ ಸಭಾ ಕಾರ್‍ಯಕ್ರಮದಲ್ಲಿ ಆಶೀರ್ವಚನ ನೀಡಲಿದ್ದಾರೆ. ಅಪರಾಹ್ನ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 6 ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪಂಚಾಂಗಕರ್ತ ವಾಸುದೇವ ಜೋಯಿಸ ಶುಭಾಸಂಸನೆ, ಕಬ್ಯಾಡಿ ಜಯರಾಮ ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ. ಕುಂದರ್, ಡಾ| ಎಂ. ಅಣ್ಣಯ್ಯ ಕುಲಾಲ್, ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ ಕುಮಾರ್ ಭಟ್, ಬ್ರಹ್ಮಕುಂಬಾಭಿಷೇಕ ಸಮಿತಿಯ ಅಧ್ಯಕ್ಷ ಕುಶಲ ಶೆಟ್ಟಿ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು. ಸತ್ಯನಾರಾಯಣ ರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸಾಂಸ್ಕೃತಿಕ ವೈವಿಧ್ಯ

ಎ.20 ರ ರಾತ್ರಿ 9ಕ್ಕೆ ಶ್ರೀ ಲಕ್ಷ್ಮಿ ನಾರಾಯಣ ಯಕ್ಷಗಾನ ಸಂಘದಿಂದ ಯಕ್ಷಗಾನ, ಎ.21ರ ಬೆಳಗ್ಗೆ 11ಕ್ಕೆ ವಿದುಷಿ ಪವನ ಬಿ. ಆಚಾರ್ ಅವರಿಂದ ವೀಣಾ ವೈಭವ – 21 ವೀಣೆಗಳ ವೈಭವ, ಸಂಜೆ 4 ಕ್ಕೆ ಡಾ| ವಿದ್ಯಾಭೂಷಣ ಅವರಿಂದ ಭಕ್ತಿಗಾಯನ, ರಾತ್ರಿ 8.30 ರಿಂದ ಜಗದೀಶ ಆಚಾರ್ ಪುತ್ತೂರು ಅವರಿಂದ ಸಂಗೀತ ಗಾನ, ಸಂಭ್ರಮ, ರಾತ್ರಿ 10 ಕ್ಕೆ ಶಿವದೂತೆ ಗುಳಿಗೆ ನಾಟಕ ಪ್ರದರ್ಶನಗೊಳ್ಳಲಿದೆ. ಎ. 22 ರ ಅಪರಾಹ್ನ 2ಕ್ಕೆ ಬ್ರಹ್ಮಗಾನ, ಸಂಜೆ 4 ಕ್ಕೆ ವರಾಹ ರೂಪಂ ಜಾನಪದ ಹಾಡಿನ ಪ್ರಸ್ತುತಿ, ರಾತ್ರಿ 8.30ಕ್ಕೆ ಗೆಜ್ಜೆನಾದ, ರಾತ್ರಿ ಮೆಕ್ಕೆಕಟ್ಟು ಮೇಳದಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.


Spread the love