ಹೆಲ್ಮೆಟ್ ಅರಿವು ಮೂಡಿಸಲು ಎಸ್ಪಿ ಅಣ್ಣಾಮಲೈ ಬುಲೆಟ್ ಏರಿ ನಗರ ಪ್ರದಕ್ಷಿಣೆ
ಚಿಕ್ಕಮಗಳೂರು: ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಜತೆಗೂಡಿ ಬುಲೆಟ್ ಏರಿ ನಗರ ಪ್ರದಕ್ಷಿಣೆ ಹಾಕುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಯುವಕರು ಹೆಲ್ಮೆಟ್ ಧರಿಸಿಯೇ ದ್ವಿಚಕ್ರ ವಾಹನ ಚಲಾಯಿಸುವಂತೆ ಅರಿವು ಮೂಡಿಸಿದರು.
ನಗರದ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಮಂಗಳವಾರ ಸಂಚಾರಿ ಸಪ್ತಾಹದ ಅಂಗವಾಗಿ ಹೆಲ್ಮೆಟ್ ಅರಿವು ಜಾಥಾಕ್ಕೆ ಚಾಲನೆ ನೀಡಿದರು.
ಹಸಿರು ನಿಸಾನೆ ತೋರಿಸುವ ಮೂಲಕ ಚಾಲನೆ ನೀಡಿದ ಎಸ್ಪಿ ಅಣ್ಣ್ಣಾಮಲೈ ಹೆಲ್ಮೆಟ್ ಧರಿಸಿ ಬುಲೆಟ್ ಏರಿದರು. ವಾಹನದ ಮೇಲೇರುತ್ತಿದ್ದಂತೆ ಡಿವೈಎಸ್ಪಿ ಕೆ.ಎಚ್.ಜಗದೀಶ್, ನಗರ ವೃತ್ತ ನಿರೀಕ್ಷಕ ನಿರಂಜನ್ಕುಮಾರ್, ಸಂಚಾರಿ ಪಿಎಸ್ಐ ರಮ್ಯಾ ಕೂಡ ದ್ವಿಚಕ್ರ ವಾಹನವೇರಿ ಜಾಥಾದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಸಂಚಾರಿ ಪೊಲೀಸರು ಸೇರಿದಂತೆ 40ಕ್ಕೂ ಹೆಚ್ಚು ಸಿಬ್ಬಂದಿ ಹೆಲ್ಮೆಟ್ ಧರಿಸಿ ಸಮವಸ್ತ್ರದೊಂದಿಗೆ ದ್ವಿಚಕ್ರ ವಾಹನ ಓಡಿಸಿಕೊಂಡು ರಸ್ತೆಗಿಳಿದರು. ದಾರಿಯುದ್ದಕ್ಕೂ ಸಂಚಾರಿ ನಿಯಮಗಳನ್ನು ಪಾಲಿಸಿ ಪ್ರಾಣ ರಕ್ಷಣೆ ಮಾಡಿಕೊಳ್ಳಿ. ಹೆಲ್ಮೆಟ್ ಧರಿಸಿ ದ್ವಿಚಕ್ರವಾಹನ ಚಲಾಯಿಸಿ ಎಂದು ವಿವಿಧ ಘೊಷಣೆಗಳನ್ನು ಕೂಗುತ್ತ ಯುವ ಸಮೂಹವನ್ನು ಎಚ್ಚರಿಸುತ್ತ ಸಾಗಿದರು. ಮಲ್ಲಂದೂರು ವೃತ್ತದಲ್ಲಿ ಸಿಗ್ನಲ್ ಬಳಿ ಬೈಕ್ ಜಾಥಾ ಬರುತ್ತಿದ್ದಂತೆ ರೆಡ್ ಸಿಗ್ನಲ್ ಬಿದ್ದಾಗ ನಿಯಮಕ್ಕೆ ಬದ್ಧರಾಗಿ ಎಸ್ಪಿ ಅಣ್ಣಾಮಲೈ ಬೈಕ್ ನಿಲ್ಲಿಸಿ ಗ್ರೀನ್ ಸಿಗ್ನಲ್ ಬಳಿಕ ಸಾಗಿದ್ದು ಎಲ್ಲರ ಗಮನ ಸೆಳೆಯಿತು. ಬೋಳರಾಮೇಶ್ವರ ದೇವಾಲಯದಿಂದ ಆರಂಭಗೊಂಡ ಜಾಥಾ ಐಜಿ ರಸ್ತೆ, ರತ್ನಗಿರಿ ರಸ್ತೆಯಲ್ಲಿ ಸಾಗಿ ಭುವನೇಶ್ವರಿ ವೃತ್ತದಲ್ಲಿ ಸಮಾಪನಗೊಂಡಿತು.
ಈ ವೇಳೆ ಮಾತನಾಡಿದ ಸಂಚಾರಿ ಠಾಣಾಧಿಕಾರಿ ರಮ್ಯ ರಾಷ್ಟ್ರೀಯ ಸಂಚಾರಿ ಸಪ್ತಾಹ ಅಂಗವಾಗಿ 8 ದಿನಗಳ ಕಾಲ ಸಂಚಾರಿ ನಿಯಮದ ಬಗ್ಗೆ ಎಸ್ಪಿ ಅಣ್ಣಾಮಲೈ ಆದೇಶದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆಟೋ ಚಾಲಕರು, ವಾಹನ ಚಾಲಕರು, ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಈ ಹಿಂದೆ 35 ಮಂದಿಗೆ ಪೊಲೀಸ್ ಇಲಾಖೆ ಸಹಕಾರದಿಂದ ಎಲ್ಎಲ್ಆರ್ ಮಾಡಿಸಲಾಗಿದ್ದು ಸಂಚಾರಿ ನಿಯಮ ಮತ್ತು ವಾಹನ ಚಾಲನೆ ತರಬೇತಿ ಮೂಲಕ ಅವರಿಗೆ ಡಿಎಲ್ ಕೊಡುವ ಕಾರ್ಯ ಮಾಡಲಾಗುತ್ತಿದೆ ಎಂದರು.