ಹೊನ್ನಾವರ ವಿದ್ಯಾರ್ಥಿನಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸ್ಫೋಟಕ ತಿರುವು – ಅನ್ಯಕೋಮಿನವರು ಹಲ್ಲೆ ನಡೆಸಿಲ್ಲ

Spread the love

ಹೊನ್ನಾವರ ವಿದ್ಯಾರ್ಥಿನಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸ್ಫೋಟಕ ತಿರುವು – ಅನ್ಯಕೋಮಿನವರು ಹಲ್ಲೆ ನಡೆಸಿಲ್ಲ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಡಿಸೆಂಬರ್ 14ರಂದು ವಿದ್ಯಾರ್ಥಿನಿ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ವಿದ್ಯಾರ್ಥಿನಿ ಮೇಲೆ ಯಾರು ಹಲ್ಲೆ ನಡೆಸಿಲ್ಲ ಬದಲಿಗೆ ಆಕೆಯೇ ನಿಂಬೆ ಮುಳ್ಳಿನಿಂದ ಗಾಯ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ತನಿಖೆ ವೇಳೆ ಬಹಿರಂಗಗೊಂಡಿದೆ.

ಘಟನೆ ಕುರಿತು ಉತ್ತರ ಕನ್ನಡ ಜಿಲ್ಲೆಯ ಎಸ್.ಪಿ ವಿನಾಯಕ್ ಪಾಟೀಲ್ ಮಾಹಿತಿ ನೀಡಿದ್ದು, ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿರುವ ಪ್ರಕಟಣೆಯನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ. ದಿನಾಂಕ: 14-12-2017 ರಂದು ಹೊನ್ನಾವರ ತಾಲೂಕಿನ ಮಾಗೋಡು ಅಂಚೆಯ ಕೊಡ್ಲ ಗದ್ದೆ ಗ್ರಾಮದ 9 ನೇ ತರಗತಿಯ ವಿದ್ಯಾರ್ಥಿನಿಯು ಬೆಳಗಿನ ಜಾವ ಮನೆಯಿಂದ ಸಂಶಿ ಶಾಲೆಗೆ ನಡೆದುಕೊಂಡು ಬರುವಾಗ ಬಾಲಕಿಯ ಎರಡು ಕೈ ಗಳ ಮೇಲೆ ಕೊಯ್ದ ಗಾಯಗಳಾದ ಹಿನ್ನೆಲೆಯಲ್ಲಿ ಮಾಗೋಡ ಸರ್ಕಲ್ನಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿ ಪ್ರಕ್ಷುಬ್ದ ವಾತಾವರಣವನ್ನು ನಿರ್ಮಾಣಮಾಡಿ ನಂತರ ವಿಧ್ಯಾರ್ಥಿನಿಯನ್ನು ಚಿಕಿತ್ಸೆಗಾಗಿ ಹೊನ್ನಾವರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ನೂರಾರು ಸಂಖ್ಯೆಯಲ್ಲಿ ಜನರು ಹೊನ್ನಾವರ ಸರ್ಕಾರಿ ಆಸ್ಪತ್ರೆಯ ಬಳಿ ಸೇರಿರುತ್ತಾರೆಂದು ಮಾಹಿತಿ ಬಂದ ಕೂಡಲೇ ಆಸ್ಪತ್ರೆಗೆ ಪೊಲೀಸರು ಬೇಟಿ ನೀಡಿ ಬಾಲಕಿಯನ್ನು ವಿಚಾರಣೆ ಮಾಡಿದಾಗ ತಾನು ಶಾಲೆಗೆ ಹೋಗುವಾಗ ರಸ್ತೆಯ ಮದ್ಯದಲ್ಲಿ ಬೆಳಿಗ್ಗೆ 07-30 ರ ಸಮಯದಲ್ಲಿ ಯಾರೋ ಇಬ್ಬರು ಅಪರಿಚಿತರು ಹಿಂದಿನಿಂದ ಬಂದು ಎರಡು ಕೈಗಳನ್ನು ಹಿಡಿದು ಚಾಕು ತೋರಿಸಿ ಕೊಲೆ ಮಾಡುತ್ತೇವೆ ಅಂತಾ ಬೆದರಿಸಿ ಬಾಯಿಗೆ ಕರ ವಸ್ತ್ರವನ್ನು ತುರುಕಿ, ಅಪಹರಣ ಮಾಡಲು ಪ್ರಯತ್ನಿಸಿದ್ದು ಆ ಸಮಯದಲ್ಲಿ ಅವರ ಕೈಯಲ್ಲಿದ್ದ ಚಾಕುವಿನಿಂದ ನನ್ನ ಎರಡು ಕೈಗಳಿಗೆ ಹೊಡೆದು ಗಾಯಪಡಿಸಿರುತ್ತಾರೆ ಯಾವುದೋ ದ್ವಿಚಕ್ರ ವಾಹನ ಬಂದ ಶಬ್ದವನ್ನು ಕೇಳಿ ಅವರು ಓಡಿ ಹೋಗಿರುತ್ತಾರೆ ಅವರ ಪೈಕಿ ಒಬ್ಬನು ದಪ್ಪಗಿದ್ದ ವ್ಯಕ್ತಿ ದಾಡಿ ಬಿಟ್ಟು ಕಪ್ಪಾಗಿದ್ದನು, ಇನ್ನೂಬ್ಬ ಬಾರಿಕಾಗಿದ್ದು, ಬೆಳ್ಳಗಿದ್ದು, ಜೀನ್ಸ್ ಪ್ಯಾಂಟ ಹಾಕಿದ್ದನು. ಎಂಬಿತ್ಯಾಧಿಯಾಗಿ ಬಾಲಕಿಯು ನೀಡಿದ ಹೇಳಿಕೆಯ ಮೇರೆಗೆ ಹೊನ್ನಾವರ ಪೊಲೀಸ ಠಾಣೆಯಲ್ಲಿ ಅಪರಾಧ ಸಂಖ್ಯೆ: 603/2017 ಕಲಂ: 342-363-370-307 ಸಹಿತ 34 ಐ.ಪಿ.ಸಿ ರಿತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

ಈ ಘಟನೆಯ ಹಿನ್ನೆಯಲ್ಲಿ ಮಾಗೋಡು ಭಾಗದಲ್ಲಿ ಕೆಲವು ಕಿಡಿಕೇಡಿಗಳು ಅನ್ಯ ಕೋಮಿನವರ ಬಗ್ಗೆ ಸುಳ್ಳು ಸುದ್ದಿ ಹಾಗೂ ಸಂದೇಶಗಳನ್ನು ಹಬ್ಬಿಸಿ, ಭಾವೋದ್ರೇಕಗೊಳಿಸಿ ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡಿ ಗಲಭೆ ಸೃಷ್ಠಿಸಿದ್ದು ಅನ್ಯಕೋಮಿನವರ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿದ್ದು ಈ ಬಗ್ಗೆ ಹೊನ್ನಾವರ ಠಾಣೆಯಲ್ಲಿ ನಾಲ್ಕು ವಿವಿದ ಪ್ರಕರಣಗಳು ದಾಖಲಾಗಿರುತ್ತದೆ, ಕಳೆದ ಕೆಲವು ದಿನಗಳಿಂದ ಹೊನ್ನಾವರದಲ್ಲಿದ್ದ ಪ್ರಕ್ಷುಬ್ಬ ವಾತಾರವರಣದಿಂದ ಸಹಜ ಸ್ಥಿತಿಗೆ ಮರಳುತ್ತಿದ್ದ ಹೊನ್ನಾವರದಲ್ಲಿ ಪುನಃ ಆತಂಕಕಾರಿ ವಾತಾರವಣವನ್ನು ಸೃಷ್ಠಿಸಿರುತ್ತಾರೆ.

ಬಾಲಕಿಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿವಿಧ ಅಧಿಕಾರಿ ಸಿಬ್ಬಂದಿಗಳ ತಂಡವನ್ನು ರಚಿಸಿ ತನಿಖೆ ಮಾಡಲಾಗಿ ನೊಂದ ಶಾಲಾ ಬಾಲಕಿಯನ್ನು ಮಹಿಳಾ ಸಾಂತ್ವನ ಕೇಂದ್ರದ ನುರಿತ ಆಪ್ತ ಸಮಾಲೋಚಕರ ಸಮಕ್ಷಮದಲ್ಲಿ ವಿಚಾರಣೆ ಮಾಡಿದಾಗ ಈ ಕೆಳಕಂಡ ವಿಷಯ ಬೆಳಕಿಗೆ ಬಂದಿರುತ್ತದೆ.

ನೊಂದ ಬಾಲಕಿಯು ತನ್ನ ಮನೆಯಿಂದ ಸುಮಾರು 8 ಕಿ.ಮೀಟರ್ ದೂರದಲ್ಲಿ ಇರುವ ಸಂಶಿ ಶಾಲೆಗೆ ಕಾಡಿನ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಹೋಗಿ ಬರುತ್ತಿದ್ದು , ಬಾಲಕಿಯ ಸ್ವಜಾತಿಯ ಗ್ರಾಮದ ಗಣೇಶ ಈಶ್ವರ ನಾಯ್ಕ ಸಾ: ಬಜ್ಜಿಕೇರಿ, ಮಾಗೋಡ ಅಂಚೆ, ಹೊನ್ನಾವರ ತಾಲೂಕು ಈತನು ಕಳೆದ 5-6 ತಿಂಗಳಿಂದ ಬಾಲಕಿಯು ಶಾಲೆಗೆ ಹೋಗಿ ಬರುವಾಗ ನಿರಂತರವಾಗಿ ರಸ್ತೆಯಲ್ಲಿ ಬಂದು ಅಡ್ಡಗಟ್ಟಿ ತನ್ನ ಕಾರು ಮತ್ತು ದ್ವಿಚಕ್ರ ವಾಹನದಲ್ಲಿ ಕೂರುವಂತೆ, ಅವನೊಡನೆ ಓಡಾಡುವಂತೆ ಪೀಡಿಸುತ್ತಿದ್ದು ಇದರಿಂದ ಬಾಲಕಿ ಮಾನಸಿಕ ಆಘಾತಕ್ಕೊಳಗಾಗಿದ್ದಳು. ಕಳೆದ ಶುಕ್ರವಾರ ಬಾಲಕಿಯು ಶಾಲೆಗೆ ಹೋಗುವಾಗ ಪೀಡಕನು ದಾರಿ ಮಧ್ಯದಲ್ಲಿ ಬಾಲಕಿಯನ್ನು ಅಡ್ಡ ಹಾಕಿ ನಿನಗೆ ತುಂಬಾ ಸೊಕ್ಕು, ನನ್ನ ಬೈಕನಲ್ಲಿ ಕರೆದರೆ ಬರಲಿಕ್ಕೆ ಆಗುವುದಿಲ್ಲಾವಾ, ನಿನಗೆ ಏನಾದರು ಆದರೆ ತಾನಾಗಿಯೇ ನನ್ನ ಜೊತೆ ನನ್ನ ಬೈಕನಲ್ಲಿ ಬರುತ್ತಿಯಾ ಎಂದು ಇತ್ಯಾಧಿಯಾಗಿ ಬೆದರಿಕೆ ಹಾಕಿದ್ದನು. ಪೀಡಕಿನಿಂದ ನಾನು ತೊಂದರೆಗೆ ಒಳಗಾದರೆ ನನ್ನ ತಂದೆ- ತಾಯಿ ಮರ್ಯಾದೆ ಹಾಳಾಗುತ್ತದೆ, ನನ್ನ ಶಿಕ್ಷಣ ಹಾಳಾಗುತ್ತದೆ ಎಂದು ಆತಂಕಗೊಂಡ ಬಾಲಕಿಯು ಈ ವಿಷಯವನ್ನು ಕಳೆದ ವಾರ ತನ್ನ ತಾಯಿಗೆ ತಿಳಿಸಿದ್ದಳು.

ಬಾಲಕಿಯ ತಾಯಿಯು ಈ ವಿಚಾರವನ್ನು ಗ್ರಾಮ ಪಂಚಾಯಿತ ಸದಸ್ಯರು ಹಾಗೂ ಊರ ಮುಖಂಡರೊಬ್ಬರ ಗಮನಕ್ಕೆ ತಂದಿದ್ದು ಅವರು ಸಹಾ ವಿಚಾರಣೆ ಮಾಡಿ ಪೀಡಕನಿಗೆ ಎಚ್ಚರಿಕೆ ನೀಡುವುದಾಗಿ ಭರವಸೆ ನೀಡಿದ್ದರು. ನಂತರ ಹೊನ್ನಾವರ ಗಲಾಟೆಯ ಹಿನ್ನೆಯಲ್ಲಿ ಬಾಲಕಿಯು 3-4 ದಿನ ಶಾಲೆಗೆ ರಜೆ ಮಾಡಿದ್ದಳು. ಬುಧವಾರ ಸಂಜೆ ಬಾಲಕಿಯು ತನ್ನ ಸ್ನೇಹಿತೆಗೆ ಪೋನ ಮಾಡಿದಾಗ ಗುರುವಾರ ಶಾಲೆಯಲ್ಲಿ ಎಪ್.ಎ 3 [ ಕನ್ನಡ, ಗಣಿತ, ಹಿಂದಿ, ಡ್ರಾಯಿಂಗ್] ಪರೀಕ್ಷೆ ಇದೆ ಎಂದು ಸ್ನೇಹಿತೆಯಿಂದ ಬಾಲಕಿಗೆ ತಿಳಿದಿರುತ್ತದೆ. ಪೀಡಕನ ಪೀಡನೆಯಿಂದ ಮಾನಸಿಕ ಆಘಾತಕ್ಕೆ ಒಳಗಾಗಿದ್ದ ಬಾಲಕಿಯು ಸರಿಯಾಗಿ ಅಭ್ಯಾಸ ಮಾಡದೇ ಇದ್ದುದರಿಂದ ಪರೀಕ್ಷೆಯ ಬಗ್ಗೆ ಆತಂಕಗೊಂಡಿದ್ದಳು. ಅಲ್ಲದೇ ಗುರುವಾರ ಶಾಲೆಗೆ ಹೋಗುವಾಗ ಪೀಡಕನು ತನಗೆ ಏನಾದರು ಮಾನಭಂಗ ಮಾಡಿದಲ್ಲಿ ಮನೆಯ ಮರ್ಯಾದೆ ಹೋಗುತ್ತದೆ ಎಂಬ ಭಯದಿಂದ ತಾನು ಬದುಕಬಾರದು ಅಂದುಕೊಂಡು ಬದುಕಿದರೆ ಪೀಡಕನು ತನಗೆ ಏನಾದರು ಮಾಡಬಹುದು ಅಂತಾ ಯೋಚಿಸಿ ಬಾಲಕಿಯು ದಿನಾಂಕ: 14-12-2017 ರಂದು ಬೆಳಿಗ್ಗೆ ಮನೆಯಿಂದ ಶಾಲೆಗೆ ಹೋಗುವಾಗ ದಾರಿ ಮಧ್ಯದಲ್ಲಿ ತಾನು ತಂದಿದ್ದ ನಿಂಬೆ ಹಣ್ಣಿನ ಗಿಡದ ಮುಳ್ಳಿನಿಂದ ತನ್ನ ಎರಡು ಕೈಗಳ ಮೇಲೆ ತಾನಾಗಿಯೇ ಗಾಯ ಮಾಡಿಕೊಂಡಿರುತ್ತಾಳೆ, ನಂತರ ತಾನು ಮಾಡುತ್ತಿರುವುದು ತಪ್ಪು ಎಂದು ಅರಿವಾದ ಬಾಲಕಿಯು ಹಾಗೇ ಶಾಲೆಗೆ ಹೋಗಲು ತಿರ್ಮಾನಿಸಿದಳು. ಮಾಗೋಡಿಗೆ ಬಂದ ನಂತರ ತನ್ನ ಸ್ನೇಹಿತೆಯ ಮೂಲಕ ಕೈಗೆ ಸುತ್ತಿಕೊಳ್ಳಲು ಬ್ಯಾಂಡೇಜ ತರುವಂತೆ ಅಂಗಡಿಗೆ ಕಳುಹಿಸಿದಳು. ಬಾಲಕಿಯ ಸ್ನೇಹಿತೆ ಚಿಕ್ಕ ಬ್ಯಾಂಡೇಡ್ ಪಟ್ಟಿ ತಂದಿದ್ದು ಅದು ಗಾಯಕ್ಕೆ ಸಾಕಾಗಾವುದಿಲ್ಲಾ ಅದನ್ನು ವಾಪಸ್ಸ ನೀಡಿ ದೊಡ್ಡ ಬ್ಯಾಡೇಜ್ ಬಟ್ಟೆಯನ್ನು ತರುವಂತೆ ಹೇಳಿ ಕಳಹಿಸಿದಾಗ ಅಂಗಡಿಯವನೇ ನೊಂದ ಬಾಲಕಿಯನ್ನು ಕರೆದು ಗಾಯವನ್ನು ಪರೀಕ್ಷಿಸಿ, ಗಾಯ ಹೇಗೆ ಉಂಟಾಗಿದೆ ಎಂಬ ಮಾಹಿತಿಯನ್ನು ಬಾಲಕಿಯಿಂದ ಪಡೆಯದೇ, ನಿನ್ನೆ ಯಾರೋ ಇಬ್ಬರೂ ಅಪರಿಚಿತರು ರಾತ್ರಿ ವೇಳೆಯಲ್ಲಿ ಕೊಡ್ಲಗದ್ದೆಯ ಕಡೆಗೆ ಹೋಗುವುದನ್ನು ನಾನು ನೋಡಿದ್ದೇನೆ ಅದರಲ್ಲಿ ಒಬ್ಬನಿಗೆ ಗಡ್ಡ ಇತ್ತು ಇನ್ನೂಬ್ಬ ಸಪೂರವಾಗಿದ್ದ ಅವರೇ ಚಾಕುವಿನಿಂದ ಈ ಗಾಯ ಮಾಡಿರುತ್ತಾರೆ, ಎಂದು ಹೇಳಿದ್ದು ಅಲ್ಲಿಗೆ ಬಂದ ಗ್ರಾಮಸ್ಥರು ಸಹಾ ಆ ಇಬ್ಬರೂ ವ್ಯಕ್ತಿಗಳನ್ನು ನಾವು ಸಹಾ ನೋಡಿರುತ್ತೇವೆ ಎಂದು ಹೇಳುತ್ತಾ ತಮಗೆ ತಾವೇ ಅನ್ಯ ಕೋಮಿನವರೇ ಈ ಕತ್ಯ ಎಸಗಿರುತ್ತಾರೆ ಎಂದು ಸುಳ್ಳು ಅಂತೆ ಕಂತೆಗಳ ಕಥೆಯನ್ನು ಸೃಷ್ಠಿಸಿರುತ್ತಾರೆ, ಮೊದಲೇ ಭಯ ಹಾಗೂ ಗೊಂದಲದಲ್ಲಿದ್ದ ನೊಂದ ಬಾಲಕಿಯು ತನಗೆ ತಾನೇ ಗಾಯಮಾಡಿಕೊಂಡಿರುವುದಾಗಿ ಹೇಳಲು ಭಯಪಟ್ಟು ಜನರು ಮಾತಾಡಿಕೊಂಡ ವಿಷಯವನ್ನೇ ತನ್ನ ನೆನಪಿನಲ್ಲಿ ಇಟ್ಟುಕೊಂಡು ಆಸ್ಪತ್ರೆಯಲ್ಲಿ ಪೊಲೀಸರ ಮುಂದೆ ಅದೇ ರೀತಿ ಹೇಳಿಕೆ ನೀಡಿರುವುದಾಗಿ ತಿಳಿಸಿರುತ್ತಾಳೆ.

ತಜ್ಞ ವೈದ್ಯರಿಂದ ಬಾಲಕಿಯ ಕೈಗಳ ಮೇಲೆ ಉಂಟಾದ ಗಾಯಗಳನ್ನು ಪರಿಶೀಲನೆ ಮಾಡಿಸಲಾಗಿ ಅವುಗಳು ಹೆದರಿಕೆಯಿಂದ ಸ್ವಯಂ ಮಾಡಿಕೊಂಡ ಗಾಯಗಳ [Hesitation injury Mark] ಲಕ್ಷಣವನ್ನು ಹೊಂದಿರುತ್ತದೆ ಎಂದು ಧೃಡಪಡಿಸಿರುತ್ತಾರೆ. ಆಪ್ತ ಸಮಾಲೋಚನೆಯ ಕಾಲದಲ್ಲಿ ಬಾಲಕಿಯು ಸಹಾ ಈ ಬಗ್ಗೆ ಒಪ್ಪಿಕೊಂಡಿರುತ್ತಾಳೆ. ಮಾನ್ಯ ನ್ಯಾಯಾಲಯದ ಮುಂದೆಯೂ ಸಹಾ ಬಾಲಕಿಯ ಹೇಳಿಕೆಯನ್ನು ದಾಖಲಿಸಲಾಗಿದೆ,

ಈ ಬಗ್ಗೆ ಬಾಲಕಿಯ ಹೇಳಿಕೆ ಪಡೆದು ಪೋಕ್ಸೋ[ ಲೈಗಿಂಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆ] ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ, ಆರೋಪಿತನಾದ ಗಣೇಶ ಈಶ್ವರ ನಾಯ್ಕ ಸಾ: ಬಜ್ಜಿಕೇರಿ, ಮಾಗೋಡ, ಹೊನ್ನಾವರ ತಾಲೂಕ ಈತನು ಈಗಾಗಲೇ ತಲೆಮರೆಸಿಕೊಂಡಿದ್ದು ಅವನನ್ನು ಬಂಧಿಸಲು ತೀವೃ ಪ್ರಯತ್ನ ಮುಂದುವರೆದಿದ್ದು, ಬಂಧನದ ನಂತರ ಮಾಹಿತಿಯನ್ನು ನೀಡಲಾಗುವುದು. ಗಲಭೆ ಉಂಟು ಮಾಡಿದವರನ್ನು ಹಾಗೂ ಶಾಂತಿ ಕದಡಲು ಪ್ರಯತ್ನಿಸುತ್ತಿರುವವರನ್ನು ದಸ್ತಗಿರಿ ಮಾಡಲು ತಂಡ ರಚನೆ ಮಾಡಲಾಗಿದ್ದು ತೀವೃ ಶೋಧ ಕಾರ್ಯಚರಣೆ ಮುಂದುವರೆದಿರುತ್ತದೆ,

ಕೆಲವು ಕಿಡಿಗೇಡಿಗಳು ಶಾಂತಿ ಕದಡುವ, ಕೋಮು ಸಾಮರಸ್ಯವನ್ನು ಹಳು ಮಾಡುವ ದುರುದ್ದೇಶದಿಂದ ಜನರನ್ನು ಭಾವೋದೇಕಗೊಳಿಸಿ, ಗಲಭೆ ಉಂಟಾಗುವಂ ತೆ ಪ್ರಚೋದಿಸುವ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮುಖಾಂತರ ಹಬ್ಬಿಸುತ್ತಿದ್ದು ಸಾರ್ವಜನಿಕರು ಆ ಬಗ್ಗೆ ಗಮನ ಕೊಡಬಾರದಾಗಿ ಕೋರಲಾಗಿದೆ, ಈ ರೀತಿ ಯ ಸುಳ್ಳು ಸುದ್ದಿ ಹಬ್ಬಿಸುವರ ಬಗ್ಗೆ ಗಲಭೆ ಉಂಟು ಮಾಡುತ್ತಿದ್ದ ಬಗ್ಗೆ ಮಾಹಿತಿ ಇದ್ದಲ್ಲಿ ಈ ಕೆಳಕಂಡ ದೂರವಣಿ ಸಂಖ್ಯೆಗಳಿಗೆ ಮಾಹಿತಿ ನಿಡಲು ಕೋರಲಾಗಿದೆ, ಜಿಲ್ಲಾ ಪೊಲೀಸ ನಿಯಂತ್ರಣ ಕೊಠಡಿಯ ವಾಟ್ಸಪ್ ನಂಬರ್ : 948080805200 ಹೊನ್ನಾವರ ಪೊಲೀಸ ಠಾಣೆ: 08387-220248, ಸಿ.ಪಿ.ಐ ಹೊನ್ನಾವರ : 9480805233, ಪಿ.ಎಸ್.ಐ ಹೊನ್ನಾವರ : 9480805273.


Spread the love
2 Comments
Inline Feedbacks
View all comments
7 years ago

Anya kominavara komana jaarisuva buddhi innadaroo nillisi.

7 years ago

This is the only job of RSS, BJP, ABVP to do such thing and provocate innocent people and disappear when the problem bursts. This is called as …. otherwise, they don’t get peoples vote.