ಹೊರ ದೇಶ, ರಾಜ್ಯ ಜಿಲ್ಲೆಯವರನ್ನು ಯೋಗ್ಯ ರೀತಿಯಲ್ಲಿ ಕ್ವಾರಂಟೈನ್ ಮಾಡಲು ಸರ್ವ ರೀತಿಯ ಸಹಕಾರಕ್ಕೆ ಸಿದ್ದ – ಹಾಲಾಡಿ ಶ್ರೀನಿವಾಸ ಶೆಟ್ಟಿ
ಕುಂದಾಪುರ: ವಿದೇಶ, ರಾಜ್ಯ, ಜಿಲ್ಲೆಗಳಲ್ಲಿರುವ ನಮ್ಮವರು ಇಲ್ಲಿಗೆ ಬಂದಾಗ ಯೋಗ್ಯ ರೀತಿಯಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡುವುದು ನಮ್ಮ ಆದ್ಯ ಕರ್ತವ್ಯ. ನಮ್ಮನ್ನೇ ನಂಬಿಕೊಂಡು ಅವರೆಲ್ಲಾ ಬರುತ್ತಿದ್ದಾರೆ. ಆ ನಿಟ್ಟಿನಲ್ಲಿ ಸುವ್ಯವಸ್ಥಿತವಾದ ರೀತಿಯಲ್ಲಿ ಕ್ವಾರಂಟೈನ್ ಮಾಡುವಲ್ಲಿ ನಮ್ಮಿಂದ ಏನು ಸಹಕಾರ ಬೇಕೊ ಅದನ್ನು ಖಂಡಿತವಾಗಿ ನೀಡುತ್ತೇವೆ. ಇದೊಂದು ರಾಷ್ಟ್ರೀಯ ವಿಪತ್ತಾಗಿದ್ದು, ಅಧಿಕಾರಿಗಳು ಯಾವುದೇ ಸಂದರ್ಭದಲ್ಲಿ ಕರೆದರೂ ನಾವು ಸ್ಪಂದಿಸಲು ಸಿದ್ಧರಿದ್ದೇವೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಸಂಜೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹೊರ ರಾಜ್ಯ, ಜಿಲ್ಲೆಗಳಿಂದ ಬರುವವರ ಕ್ವಾರಂಟೈನ್ ನಿರ್ವಹಣೆಯ ಬಗ್ಗೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು.
ಕ್ವಾರಂಟೈನ್ನಲ್ಲಿ ವಿಶಾಲವಾದ ಸ್ಥಳವಕಾಶವಿರಲಿ, ಮೂಲಭೂತ ಸೌಕರ್ಯಗಳು ಇರಲಿ. ಊಟೋಪಚಾರ ಕ್ಲಪ್ತ ಸಮಯಕ್ಕೆ ಸಿಗುವಂತಾಗಲು ಕ್ವಾರಂಟೈನ್ ಸೆಂಟರ್ಗಳು ಹತ್ತಿರದಲ್ಲಿರಲಿ. ಹೊರ ಭಾಗದಿಂದ ಬರುವವರ ಊರಿನ ಆಸುಪಾಸಿನಲ್ಲಿ ಕ್ವಾರಂಟೈನ್ ಸೆಂಟರ್ ಇದ್ದರೆ ಅವರ ಮನೆಯವರು ಬಟ್ಟೆ ಬರೆಗಳನ್ನು ಕೊಟ್ಟು ಹೋಗಲು ಅನುಕೂಲವಾಗುತ್ತದೆ. ಪದೇ ಪದೇ ಕ್ವಾರಂಟೈನ್ನಲ್ಲಿ ಇರುವವರನ್ನು ಮನೆಯವರಿಗೆ ಭೇಟಿಯಾಗಲು ಬಿಡಬೇಡಿ. ಕ್ವಾರೈಂಟನ್ ಮುಗಿದ ಬಳಿಕವೇ ಮನೆಯವರ ಬೇಟಿಗೆ ಅವಕಾಶ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಹೊರ ರಾಜ್ಯ, ಜಿಲ್ಲೆಗಳಲ್ಲಿ ಇರುವ ನಮ್ಮವರು ಅತಂತ್ರರಾಗಿದ್ದಾರೆ. ಅವರನ್ನು ಕರೆತಂದು ಕ್ವಾರಂಟೈನ್ ಮಾಡಬೇಕಾಗಿರುವುದು ನಮ್ಮ ಹೊಣೆಗಾರಿಕೆ. ಕೊರೊನಾ ಮುಕ್ತ ಜಿಲ್ಲೆಯಾಗಿ ಉಡುಪಿ ಮುಂದುವರಿಯಬೇಕು. ಹಾಗಾಗಿ ಜಾಗೃತಿಯಿಂದ ಕ್ವಾರಂಟೈನ್ ನಿರ್ವಹಣೆ ಮಾಡಬೇಕು. ಕೊಲ್ಲೂರಿನಲ್ಲಿ ಕ್ವಾರಂಟೈನ್ ಮಾಡಲು ಸಾಕಷ್ಟು ಸುವ್ಯವಸ್ಥಿತ ವ್ಯವಸ್ಥೆಗಳು ಇವೆ. ಐದು ಸಾವಿರ ಜನ ತಂಗಬಹುದಾದಷ್ಟು ವ್ಯವಸ್ಥೆ ಕೊಲ್ಲೂರಲ್ಲಿ ಇದೆ. ದೇವಸ್ಥಾನದ ವತಿಯಿಂದ ಊಟ ನೀಡುವುದರಿಂದ ಇದು ಅನುಕೂಲವಾಗುತ್ತದೆ ಎಂದರು.
ಕ್ವಾರಂಟೈನ್ ವ್ಯವಸ್ಥೆಯ ಬಗ್ಗೆ ವಿವರಿಸಿದ ಅಧಿಕಾರಿಗಳು 1500ಕ್ಕೂ ಹೆಚ್ಚು ಜನ ಹೊರರಾಜ್ಯಗಳಿಂದ ಬರಲಿದ್ದಾರೆ. 29 ಲಾಡ್ಜ್ಗಳ ಮುಖ್ಯಸ್ಥರ ಜೊತೆ ಮಾತನಾಡಿದ್ದೇವೆ. ಸರ್ಕಾರಿ ಕ್ವಾರಂಟೈನ್ಗೆ ಊಟದ ವ್ಯವಸ್ಥೆಯನ್ನು ಅನೆಗುಡ್ಡೆ ದೇವಸ್ಥಾನ, ಕೊಲ್ಲೂರು, ಮಂದಾರ್ತಿ ದೇವಸ್ಥಾನಗಳ ಮೂಲಕ ಪಡೆದುಕೊಳ್ಳಲಾಗುತ್ತಿದೆ. ಲಾಡ್ಜ್ಗಳಲ್ಲಿ ಕ್ವಾರಂಟೈನ್ ಮಾಡಿಸಿಕೊಳ್ಳುವವರು ಅವರೇ ಹಣ ಪಾವತಿಸಬೇಕಾಗುತ್ತದೆ ಎಂದರು.
ಕುಡಿಯುವ ನೀರಿನ ಸಮಸ್ಯೆಗೆ ಬಗೆಹರಿಸಿ
ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ಕೂಡಲೇ ಕುಡಿಯುವ ನೀರನ್ನು ಒದಗಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಸೂಚಿಸಿದರು. ಯಾರೂ ಕೂಡಾ ಕುಡಿಯುವ ನೀರಿಗೆ ಹಾಹಾಕಾರ ಪಡಬಾರದು ಎಂದು ತಿಳಿಸಿದರು.
ಸಭೆಯಲ್ಲಿ ಸಹಾಯಕ ಆಯುಕ್ತರಾದ ಕೆ.ರಾಜು, ಎಎಸ್ಪಿ ಹರಿರಾಂ ಶಂಕರ, ತಹಶೀಲ್ದಾರರು, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.