ಹೊಸ ಕ್ರಿಮಿನಲ್ ಕಾನೂನುಗಳಿಂದ ಸಂತ್ರಸ್ತರು ನ್ಯಾಯ ವಂಚಿತರಾಗಲಿದ್ದಾರೆ – ನ್ಯಾಯವಾದಿ ಶಾಂತಾರಾಮ್ ಶೆಟ್ಟಿ
ಉಡುಪಿ: ಭಾರತೀಯ ದಂಡ ಕ್ರಿಯಾ ಸಂಹಿತೆ ಬದಲಾಗಿ ಜಾರಿಗೊಳ್ಳುತ್ತಿರುವ ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಿಂದ ಪೊಲೀಸರಿಗೆ ಹೆಚ್ಚಿನ ಅಧಿಕಾರ ದೊರೆಯಲಿದೆ. ಇದರಿಂದ ಸಂತ್ರಸ್ತರು ನ್ಯಾಯ ವಂಚಿತರಾಗಲಿದ್ದಾರೆ. ಇದು ಸಂವಿಧಾನ ನಮಗೆ ನೀಡಿರುವ ನ್ಯಾಯ ಪಡೆಯುವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಉಡುಪಿಯ ಹಿರಿಯ ನ್ಯಾಯವಾದಿ ಎಂ.ಶಾಂತಾರಾಮ್ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ವಕೀಲರ ಸಂಘ, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಸಹಯೋಗ ದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಸಂವಾದ ಕಾರ್ಯಕ್ರಮದಲ್ಲಿ ಭಾರತೀಯ ದಂಡ ಕ್ರಿಯಾ ಸಂಹಿತೆ ಬದಲಾಗಿ ಜಾರಿಗೊಳ್ಳುತ್ತಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಇತರ ಎರಡು ಕಾನೂನುಗಳ ಕುರಿತು ಅವರು ಮಾತನಾಡುತಿದ್ದರು.
ಬ್ರಿಟೀಷರ ಕಾಲದಲ್ಲಿ ಜಾರಿಗೆ ಬಂದ ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರೋಸಿಜರ್ ಕೋಡ್(ಸಿಆರ್ಪಿಸಿ), ಭಾರತ ಸಾಕ್ಷ ಅಧಿನಿಯಮ(ಇಂಡಿಯನ್ ಎವಿಡೆನ್ಸ್ ಆ್ಯಕ್ಟ್) ತುಂಬಾ ಪ್ರಮುಖವಾದ ಕಾನೂನುಗಳು. ಇದುವೇ ನಿಜವಾದ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್. ಈ ಮೂರು ಕಾನೂನುಗಳು ರತ್ನಗಳು ಇದ್ದಂತೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಹೊಸ ಕಾನೂನು ಯಾವ ಉದ್ದೇಶಕ್ಕೆ ತರಲಾಗಿದೆ ಎಂಬುದು ಅರ್ಥ ಆಗುತ್ತಿಲ್ಲ ಎಂದರು.
ಭಾರತೀಯ ದಂಡ ಕ್ರಿಯಾ ಸಂಹಿತೆ ಕಾನೂನುಗಳನ್ನು ಬದಲಾಯಿಸುವಂತೆ ಜನರಿಂದ ಯಾವುದೇ ಒತ್ತಾಯಗಳು ಬಂದಿಲ್ಲ ಮತ್ತು ಯಾವುದೇ ಪಕ್ಷಗಳ ಪ್ರಣಾಳಿಕೆಯಲ್ಲೂ ಆ ಬೇಡಿಕೆ ಇರಲಿಲ್ಲ. ಆದರೂ ಏಕಾಏಕಿ ಈ ಹೊಸ ಕಾನೂನುಗಳನ್ನು ಜನರ ಮೇಲೆ ಏರಲಾಗುತ್ತಿದೆ ಎಂದ ಅವರು, ಕಾಲಕ್ಕೆ ತಕ್ಕಂತೆ ಕಾನೂನು ಬದಲಾಗಬೇಕು. ಅದರಂತೆ ಹಲವು ಕಾನೂನುಗಳಿಗೆ ತಿದ್ದುಪಡಿ ಕೂಡ ಆಗಿದೆ. ಆದರೆ ಇಡೀ ಕಾನೂನುಗಳನ್ನೇ ಬದಲಾಯಿಸುವ ಅಗತ್ಯ ಇದೆಯೇ ಎಂಬುದು ಎಲ್ಲರ ಪ್ರಶ್ನೆಯಾಗಿದೆ ಎಂದು ಅವರು ತಿಳಿಸಿದರು.
ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರ ನಾಥ್ ಶಾನುಭೋಗ್ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತ ಮೈಕಲ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು