ಹೊಸ ವರ್ಷದ ಆಚರಣೆ : ಪೋಲಿಸ್ ಸೂಚನೆ ಪಾಲಿಸಿ

Spread the love

ಹೊಸ ವರ್ಷದ ಆಚರಣೆ : ಪೋಲಿಸ್ ಸೂಚನೆ ಪಾಲಿಸಿ

ಮಂಗಳೂರು: ಹೊಸ ವರ್ಷದ ಆಚರಣೆಯ ಸಂಬಂಧ ಮಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾರ್ವಜನಿಕರಿಗೆ, ಹೋಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಿಗೆ ಈ ಕೆಳಕಂಡ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೋಲಿಸ್ ಪ್ರಕಟಣೆ ಮೂಲಕ ಮುಂಚಿತವಾಗಿ ತಿಳುವಳಿಕೆ ನೀಡಲಾಗಿದೆ.

1. ದಿನಾಂಕ: 31-12-2016 ರ ರಾತ್ರಿ ಆರಂಭವಾಗುವ ಹೊಸ ವರ್ಷಾಚರಣೆಯ ಕಾರ್ಯಕ್ರಮಗಳನ್ನು ನಗರದ ಎಲ್ಲಾ ಹೋಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳು ಮತ್ತು ವಿಶೇಷ ಕೂಟಗಳು ಮಧ್ಯರಾತ್ರಿ 01-00 ಗಂಟೆಯೊಳಗೆ (ಒಳಾವರಣದಲ್ಲಿ ಮಾತ್ರ) ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸುವುದು.

2. ರೆಸ್ಟೋರೆಂಟ್ ಮತ್ತು ಮದ್ಯಪಾನ ಸರಬರಾಜು ಮಾಡುವ ಹೋಟೇಲ್ಗಳಲ್ಲಿ ಸರ್ಕಾರವು ನಿಗದಿಪಡಿಸಿದ ಸಮಯಕ್ಕಿಂತ ಹೆಚ್ಚಿನ ಸಮಯದಲ್ಲಿ ನೂತನ ವರ್ಷಾಚರಣೆಯ ಸಂಬಂಧ ಕಾರ್ಯಕ್ರಮ ನಡೆಸಬೇಕಾದಲ್ಲಿ ಅಬಕಾರಿ ಇಲಾಖೆಯಿಂದ ಲಿಖಿತವಾಗಿ ಹೆಚ್ಚಿನ ಅವಧಿಗೆ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದು. ಅನುಮತಿ ಪಡೆದ ಪತ್ರದ ಪ್ರತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸುವುದು.

3. ಅಬಕಾರಿ ಇಲಾಖೆಯಿಂದ ಅನುಮತಿ ಪಡೆದಿದ್ದರೂ ಸಹ ಎಲ್ಲಾ ಕಾರ್ಯಕ್ರಮಗಳನ್ನು ರಾತ್ರಿ 01-00 ಗಂಟೆಯೊಳಗೆ ಮುಕ್ತಾಯ ಮಾಡುವುದು.

4. ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಏರ್ಪಡಿಸಲಾಗಿರುವ ಹೊಸ ವರ್ಷಾಚರಣೆಯ ಕಾರ್ಯಕ್ರಮದ ಹಾಗೂ ಇನ್ನಿತರೆ ನೆಪದಲ್ಲಿ ಬಸ್ಸು ತಂಗುದಾಣ, ಸಾರ್ವಜನಿಕ ಉದ್ಯಾನವನಗಳು, ಕ್ರೀಡಾಂಗಣಗಳಲ್ಲಿ, ರೈಲ್ವೇ ಸ್ಟೇಶನ್ ಹಾಗೂ ಇನ್ನಿತರೇ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ.

5. ಹೊಸ ವರ್ಷಾಚರಣೆಯ ಸಂತೋಷ ಕೂಟಗಳನ್ನು ನಡೆಸುವ ನಗರದ ಎಲ್ಲಾ ಹೋಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳ ಮಾಲೀಕರು/ ವ್ಯವಸ್ಥಾಪಕರು/ಆಡಳಿತ ವರ್ಗದವರು ನೂತನ ವರ್ಷಾಚರಣೆ ಆಚರಿಸಲು ಏರ್ಪಡಿಸಲು ಇಚ್ಚಿಸಿದಲ್ಲಿ ಈ ಬಗ್ಗೆ ಕಡ್ಡಾಯವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ರವರ ಕಛೇರಿಗೆ ಅರ್ಜಿ ಸಲ್ಲಿಸಿ, ಪೂರ್ವಾನುಮತಿ ಪಡೆದುಕೊಳ್ಳುವುದು. ಹೊಸ ವರ್ಷಾಚರಣೆಯನ್ನು ಹೋಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳ ಒಳಾವರಣದಲ್ಲೇ ನಡೆಸುವುದು.

6. ಸಾರ್ವಜನಿಕ ಮನೋರಂಜನೆಯ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಿದಲ್ಲಿ ಕಾನೂನಿನ ಅನುಸಾರವಾಗಿ ಸಂಬಂಧಪಟ್ಟ ಇಲಾಖೆಗಳಿಂದ ಪರವಾನಿಗೆಯನ್ನು ಪಡೆದು ಕಾರ್ಯಕ್ರಮಗಳನ್ನು ದಿನಾಂಕ 31-12-2016 ರ ರಾತ್ರಿ 01-00ರ ಒಳಗಡೆ ಮುಗಿಸತಕ್ಕದ್ದು.

7. ವಿದ್ಯಾರ್ಥಿಗಳು ಹಾಗೂ ಯುವಕರು ದಿನಾಂಕ 31-12-2016 ರ ರಾತ್ರಿ ಹೊಸ ವರ್ಷಾಚರಣೆಯ ನೆಪದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳಲ್ಲಿ ಅಸಭ್ಯವಾಗಿ ವತರ್ಿಸಬಾರದು, ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

8. ದಿನಾಂಕ: 31-12-2016 ರ ರಾತ್ರಿ ಆರಂಭವಾಗುವ ಹೊಸ ವರ್ಷಾಚರಣೆಯ ಸಂತೋಷ ಕೂಟಗಳನ್ನು ನಡೆಸುವ ನಗರದ ಎಲ್ಲಾ ಹೋಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳ ಮಾಲೀಕರು/ ವ್ಯವಸ್ಥಾಪಕರು/ಆಡಳಿತ ವರ್ಗದವರು ನೂತನ ವರ್ಷಾಚರಣೆ ಆಚರಿಸಲು ಮತ್ತು ಧ್ವನಿವರ್ಧಕ ಅಳವಡಿಸಲು ದಿನಾಂಕ: 31-12-2016 ರ ಸಂಜೆ 04-00 ಗಂಟೆ ಒಳಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ರವರ ಕಛೇರಿಗೆ ಅರ್ಜಿ ಸಲ್ಲಿಸಿ, ಪೂರ್ವನುಮತಿ ಪಡೆದುಕೊಳ್ಳುವುದು. ಪೂರ್ವಾನುಮತಿ ಪಡೆಯದೆ ನೂತನ ವರ್ಷಾಚರಣೆ ಆಚರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೊಸ ವರ್ಷಾಚರಣೆಯನ್ನು ಹೋಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳ ಒಳಾವರಣದಲ್ಲೇ ನಡೆಸುವುದು.

9. ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಧ್ವನಿವರ್ಧಕವನ್ನು ಅಳವಡಿಸುವವರು ತಮ್ಮ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವಂತೆ ಬಾಕ್ಸ್ ಮಾದರಿ ಧ್ವನಿವರ್ಧಕವನ್ನು ಅಳವಡಿಸಿಕೊಂಡು ಕಡಿಮೆ ಧ್ವನಿಯಲ್ಲಿ ಕಾರ್ಯಕ್ರಮವನ್ನು ನಡೆಸಬೇಕು. ಸದರಿ ಧ್ವನಿವರ್ಧಕದ ಧ್ವನಿ ಪ್ರಮಾಣವು The Noise Pollution (Regulation And Control) Rules, 2000 ರಲ್ಲಿ ನಿಗದಿಪಡಿಸಲಾದ ಪ್ರಮಾಣವನ್ನು ಯಾವುದೇ ಕಾರಣಕ್ಕೂ ಮೀರತಕ್ಕದ್ದಲ್ಲ.

10. ಹೊಸ ವರ್ಷಾಚರಣೆಯನ್ನು ನಡೆಸುವ ಹೋಟೇಲ್, ಕ್ಲಬ್ ಅಥವಾ ವಿಶೇಷ ಕೂಟಗಳ ವ್ಯವಸ್ಥಾಪಕರು ಯಾವುದೇ ಅಹಿತಕರ ಘಟನೆಗಳಾಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳತಕ್ಕದ್ದು.

11. ಹೊಸ ವರ್ಷ ಆಚರಣೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ನೆಪದದಲ್ಲಿ ಅಶ್ಲೀಲ, ಅರೆಬೆತ್ತಲೆ ಅಥವಾ ಬೆತ್ತಲೆ ನೃತ್ಯ, ಜೂಜಾಟ ನಡೆಸುವುದನ್ನು ನಿಷೇಧಿಸಲಾಗಿದೆ. ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಶುಭಕೋರುವ ನೆಪದಲ್ಲಿ ಕೀಟಲೆ/ಅಸಭ್ಯವಾಗಿ ವತರ್ತಿವುದವನ್ನು ತಡೆಯಲು ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ. ಸದರಿ ಕಾರ್ಯಪಡೆಯು ಕಾರ್ಯನಿರತವಾಗಿದ್ದು ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

12. ಹೊಸ ವರ್ಷವನ್ನು ಆಚರಿಸುವವರು ದಿ: 31-12-2016 ರ ರಾತ್ರಿ ಹೊಸ ವರ್ಷ ಆಚರಣೆಯ ನೆಪದಲ್ಲಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಬಲವಂತವಾಗಿ ನಿಲ್ಲಿಸಿ ಅವರ ಇಚ್ಛೆಗೆ ವಿರುದ್ಧವಾಗಿ ಶುಭಕೋರುವ ನೆಪದಲ್ಲಿ ಕಿರಿಕಿರಿ ಮಾಡಬಾರದು.

13. ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಬಗ್ಗೆ ನಿಗಾವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಸದರಿ ಕಾರ್ಯಪಡೆಯಲ್ಲಿ ಮಂಗಳೂರು ನಗರದ ಎಲ್ಲಾ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿರುತ್ತದೆ. ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು.

14. ಹೊಸ ವರ್ಷಾಚರಣೆ ನೆಪದಲ್ಲಿ ವಾಹನಗಳನ್ನು ವೀಲಿಂಗ್ ಮತ್ತು ಡ್ರಾಗ್ ರೇಸ್ ಮಾಡುವುದನ್ನು, ಬೊಬ್ಬೆ ಹಾಕುವುದು ಹಾಗೂ ಅತೀ ವೇಗವಾಗಿ ವಾಹನಗಳನ್ನು ಚಲಾಯಿಸುವುದು ಮತ್ತು ಕರ್ಕಶ ಶಬ್ಭ ಮಾಡುವುದುನ್ನು ತಡೆಗಟ್ಟಲು ಕೂಡಾ ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗಿದೆ. ಸದರಿ ಪಡೆಯು ಮಂಗಳೂರು ನಗರದ ಎಲ್ಲಾ ಪ್ರದೇಶಗಳಲ್ಲಿ ಚಾಲನೆಯಲ್ಲಿರುತ್ತದೆ. ಕಾನೂನು ಉಲ್ಲಂಘಿಸುವ ಪ್ರಕರಣಗಳು ಕಂಡು ಬಂದಲ್ಲಿ ಅವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು.

15. ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸಮುದ್ರ ಕಿನಾರೆಗಳಲ್ಲಿ [ಬೀಚ್ ಪ್ರದೇಶ] ಮಧ್ಯಪಾನ ಮಾಡುವುದು, ಅಶ್ಲೀಲವಾಗಿ ವರ್ತಿಸುವುದು, ಸಾಂಸ್ಕೃತಿಕ ಕಾರ್ಯಕ್ರಮಗಳ ನೆಪದದಲ್ಲಿ ಅಶ್ಲೀಲ, ಅರೆಬೆತ್ತಲೆ ಅಥವಾ ಬೆತ್ತಲೆ ನೃತ್ಯ, ಜೂಜಾಟ ನಡೆಸುವುದನ್ನು ನಿಷೇಧಿಸಲಾಗಿದೆ.

16. ಯಾವುದೇ ಕಾರಣಕ್ಕೂ ಸಾರ್ವಜನಿಕರ ಮನೆಗಳ ಮುಂದೆ ವಿದ್ಯಾರ್ಥಿಗಳ ಹಾಸ್ಟೇಲ್, ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಕಾಂಪೌಂಡ್ನೊಳಗಡೆ ಶುಭಾಶಯ ಕೋರುವ ನೆಪದಲ್ಲಿ ಅನಧಿಕೃತವಾಗಿ ಯಾವುದೇ ವ್ಯಕ್ತಿ ಅಥವಾ ಗುಂಪು ಹೋಗಿ ಕಿರಿಕಿರಿ/ಅಸಭ್ಯವಾಗಿ ವರ್ತನೆ ಮಾಡುವುದನ್ನು ಮತ್ತು ಬಲವಂತವಾಗಿ ಶುಭಾಷಯ ಕೋರುವುದನ್ನು ನಿಷೇಧಿಸಲಾಗಿದೆ. ರಸ್ತೆಯಲ್ಲಿ ಮದ್ಯಪಾನ ಮಾಡುವುದು ಮತ್ತು ಬಾಟಲಿಯನ್ನು ತೂರುವುದನ್ನು ನಿಷೇಧಿಸಿದೆ.

17. ಹೊಸ ವರ್ಷಾಚರಣೆಯ ನೆಪದಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ನೆಪದಲ್ಲಿ ಪಟಾಕಿ ಸಿಡಿಮದ್ದುಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ.

18. ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾದಲ್ಲಿ ಅರ್ಜಿದಾರರನ್ನೇ ಹೊಣೆಗಾರರನ್ನಾಗಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

19. ಹೊಸ ವರ್ಷಾಚರಣೆಯನ್ನು ಆಚರಿಸುವವರು ಮದ್ಯಪಾನ ಮಾಡಿ ವಾಹನಗಳನ್ನು ಚಾಲನೆ ಮಾಡಬಾರದು. ಚಾಲನಾ ರಹದಾರಿ ಹೊಂದಿರುವ, ಮದ್ಯಪಾನ ಮಾಡದ ಚಾಲಕರನ್ನು ವಾಹನ ಚಾಲಕರನ್ನಾಗಿ ನೇಮಿಸಿಕೊಳ್ಳುವುದು.

20. ಹೊಸ ವರ್ಷಾಚರಣೆಯ ಕಾರ್ಯಕ್ರಮಗಳನ್ನು ಆಯೋಜಿಸುವವರು ಸಂಬಂಧಪಟ್ಟ ಇಲಾಖೆಗಳಿಂದ ಪಡೆದ ಪರವಾನಿಗೆಯಲ್ಲಿ ನೀಡಿದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.
21. ಹೊಸ ವರ್ಷಾಚರಣೆಯ ಕಾರ್ಯಕ್ರಮಗಳನ್ನು ಆಯೋಜಿಸುವವರು ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಗ್ನಿಶಾಮಕ ಉಪಕರಣಗಳು, ತುರ್ತು ಚಿಕಿತ್ಸಾ ವಾಹನ ಹಾಗೂ ಇತರೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳತಕ್ಕದ್ದು.


Spread the love